ನವದೆಹಲಿ: ಐಪಿಎಸ್ ಆದಿತ್ಯ ಲಂಗೆ ಮತ್ತು ಐಎಎಸ್ ಪ್ರತಿಭಾ ಸಿಂಗ್ ದಂಪತಿಗಳು ಕರ್ತವ್ಯದ ಮೇಲಿನ ಸಮರ್ಪಣಾ ಭಾವ, ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಹೆಸರುವಾಸಿಯಾಗಿದ್ದಾರೆ. ಈ ಜೋಡಿಯು ಅನೇಕ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.
ಐಎಎಸ್ ಪ್ರತಿಭಾ ಸಿಂಗ್: ಶಿಕ್ಷಣ ಮತ್ತು ವೃತ್ತಿಜೀವನ
ಪ್ರತಿಭಾ ಅವರು ಐಐಟಿ ರೂರ್ಕಿಯಿಂದ ಬಿ.ಟೆಕ್ ಪದವಿ ಪಡೆದ ನಂತರ, ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ನಲ್ಲಿ ಎಂ.ಎಸ್. ಪದವಿ ಪಡೆದಿದ್ದಾರೆ. ಬಳಿಕ 2020ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಪ್ರತಿಭಾ ಸಿಂಗ್ ಅವರು ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಸ್ತುತ ಆಗ್ರಾದಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿ (ಸಿಡಿಒ) ಸೇವೆ ಸಲ್ಲಿಸುತ್ತಿದ್ದಾರೆ.
ಐಪಿಎಸ್ ಆದಿತ್ಯ ಲಂಗೆ: ದಕ್ಷ ಪೊಲೀಸ್ ಅಧಿಕಾರಿ
ಮೂಲತಃ ಜಮ್ಮು ಮತ್ತು ಕಾಶ್ಮೀರದವರಾದ ಆದಿತ್ಯ ಲಂಗೆ ಅವರು, ಎನ್ಐಟಿ ಶ್ರೀನಗರದಿಂದ ಇಂಜಿನಿಯರಿಂಗ್ ಪದವಿ ಪಡೆದರು. ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 182ನೇ ರ್ಯಾಂಕ್ ಪಡೆಯುವ ಮೂಲಕ ಯಶಸ್ವಿಯಾಗಿದ್ದರು. 2016ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾದ ಆದಿತ್ಯ ಲಂಗೆ, ಪ್ರಸ್ತುತ ಉತ್ತರ ಪ್ರದೇಶದ ಚಂದೌಲಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ಕಾರ್ಯನಿರ್ವಹಿಸುತ್ತಿದ್ದಾರೆ.
ತರಬೇತಿ ದಿನಗಳಲ್ಲಿ ಐಎಎಸ್ ಪ್ರತಿಭಾ ಸಿಂಗ್ ಮತ್ತು ಐಪಿಎಸ್ ಆದಿತ್ಯ ಲಂಗೆ ಅವರ ಪರಿಚಯವಾಗುತ್ತದೆ. ಬಳಿಕ ಅವರ ಪರಿಚಯ ಪ್ರೀತಿಯಾಗಿ, ಅದ್ಧೂರಿಯಾಗಿ ವಿವಾಹವಾದರು. ಈ ಜೋಡಿ ಪರಸ್ಪರ ಬೆಂಬಲವಾಗಿ ನಿಂತಿದ್ದಾರೆ. ಇಬ್ಬರೂ ಅಧಿಕಾರಿಗಳು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದು, ತಮ್ಮ ಕೆಲಸಕ್ಕಾಗಿ ಅನೇಕ ಪ್ರಶಂಸೆಗಳನ್ನು ಗಳಿಸಿದ್ದಾರೆ.

































