ನವದೆಹಲಿ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪರಿಶ್ರಮ, ಬದ್ಧತೆ ಮತ್ತು ಕಠಿಣ ಅಧ್ಯಯನದ ಅಗತ್ಯವಿದೆ. ಸಾವಿರಾರು ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಗೆ ಕುಳಿತಿದ್ದರೂ, ಅವರಲ್ಲಿ ಕೆಲವರು ಮಾತ್ರ ಸಂದರ್ಶನದ ನಂತರ ಅಂತಿಮ ಪಟ್ಟಿಗೆ ಬರುತ್ತಾರೆ. ಇದಕ್ಕೆ ಐಎಎಸ್ ಅಧಿಕಾರಿ ಡೋನೂರು ಅನನ್ಯ ರೆಡ್ಡಿ ಒಂದು ಉದಾಹರಣೆ.
2023 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ, ತೆಲಂಗಾಣದ ಮೆಹಬೂಬ್ ನಗರದ ಡೋನೂರು ಅನನ್ಯ ರೆಡ್ಡಿ ಅವರು ಅಖಿಲ ಭಾರತ 3ನೇ ರ‍್ಯಾಂಕ್ ಗಳಿಸಿದರು. ಎರಡು ವರ್ಷಗಳ ಸಮರ್ಪಿತ ಅಧ್ಯಯನದ ನಂತರ, ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.
ದೆಹಲಿಯ ಮಿರಾಂಡಾ ಹೌಸ್‌ನಿಂದ ಪದವಿ ಪಡೆದ ಡೋನೂರು ಅನನ್ಯಾ ರೆಡ್ಡಿ, ತನ್ನ ಸ್ನಾತಕೋತ್ತರ ಪದವಿಗಾಗಿ ಭೂಗೋಳಶಾಸ್ತ್ರವನ್ನು ಅಧ್ಯಯನ ಮಾಡಿದರು. ಜೊತೆಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತನ್ನ ಅಧ್ಯಯನದ ಕೊನೆಯ ಕೆಲವು ವರ್ಷಗಳಲ್ಲಿ, ಅವರು ದೆಹಲಿಗೆ ತೆರಳಿದ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಅವರು ಯುಪಿಎಸ್‌ಸಿ ಬರೆಯಲು ತಯಾರಿ ನಡೆಸುತ್ತಿದ್ದರು.
ಅನನ್ಯಾ ಅವರು ಐಚ್ಛಿಕ ವಿಷಯವಾಗಿ ಮಾನವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡರು. ಅವರು ದಿನಕ್ಕೆ 12 ರಿಂದ 14 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಇನ್ನು ಅನನ್ಯ ಅವರು ತನ್ನ ಒತ್ತಡವನ್ನು ನಿರ್ವಹಿಸಲು, ಅಧ್ಯಯನವನ್ನು ಸಮತೋಲನಗೊಳಿಸಲು ಕಾದಂಬರಿಗಳನ್ನು ಓದುತ್ತಿದ್ದರು. ಜೊತೆಗೆ ಕ್ರಿಕೆಟ್ ನೋಡುತ್ತಿದ್ದರು. ಈ ಮೂಲಕ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಯಿತು.