ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 4,02,618 ಪಡಿತರ ಚೀಟಿಗಳಿದ್ದು, ಆ ಪೈಕಿ ಸಕ್ರಿಯವಾಗಿರುವ, ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಒಟ್ಟು 2,79,836 ಪಡಿತರ ಚೀಟಿದಾರರಿಗೆ ರೂ.16.23 ಕೋಟಿ ಹಣವನ್ನು ಡಿಬಿಟಿ ಮುಖಾಂತರ ಅನ್ನಭಾಗ್ಯ ಯೋಜನೆಯಡಿ ಅರ್ಹ ಪಡಿತರ ಕುಟುಂಬಗಳಿಗೆ ನಗದು ವರ್ಗಾವಣೆಯನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ವಿತರಿಸಲು ಉದ್ದೇಶಿಸಲಾಗಿದ್ದು, 5 ಕೆ.ಜಿ ಅಕ್ಕಿಯ ಬದಲಾಗಿ ಪಡಿತರ ಚೀಟಿ ಕುಟುಂಬದಲ್ಲಿನ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ ಗೆ ರೂ.34/- ರಂತೆ ಪ್ರತಿ ಸದಸ್ಯರಿಗೆ ರೂ.170/-ರಂತೆ ಪಡಿತರ ಕುಟುಂಬದ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡಲಾಗಿದೆ.
ಅಂತ್ಯೋದಯ ಅನ್ನಯೋಜನೆಯ ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ ಆಹಾರಧಾನ್ಯ ಪಡೆಯುತ್ತಿರುವುದರಿಂದ ಅಂತಹ ಕುಟುಂಬಗಳಿಗೆ ನಗದು ಸೌಲಭ್ಯ ನೀಡಲಾಗುವುದಿಲ್ಲ. ಆದರೆ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯ ಕುಟುಂಬದಲ್ಲಿ 4 ಸದಸ್ಯರಿದ್ದರೆ ಈ ಕುಟುಂಬವು ರೂ.170/-ಗಳನ್ನು, 5 ಸದಸ್ಯರನ್ನು ಹೊಂದಿರುವ ಕುಟುಂಬವು ರೂ.510/-ಗಳನ್ನು, 6 ಸದಸ್ಯರನ್ನು ಹೊಂದಿರುವ ಕುಟುಂಬವು ರೂ.850/-ಗಳನ್ನು ಪಡೆಯುತ್ತದೆ. ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ಅನುಪಾತವು ಮುಂದುವರೆಯುತ್ತದೆ.
ಕಳೆದ ಮೂರು ತಿಂಗಳಲ್ಲಿ ಪಡಿತರ ಆಹಾರಧಾನ್ಯವನ್ನು ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ 1ಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳನ್ನು ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲಾಗಿದೆ.
ಕುಟುಂಬದ ಮುಖ್ಯಸ್ಥರನ್ನು ಗುರುತಿಸಿರುವ, ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಕುಟುಂಬಗಳು ನಗದು ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಜಿಲ್ಲೆಯಲ್ಲಿ ಒಟ್ಟು 41,888 ಪಡಿತರ ಚೀಟಿಗಳಲ್ಲಿ ಕೆಲವು ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರುವುದಿಲ್ಲ. ಕೆಲವರು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿರುವುದಿಲ್ಲ. ಇನ್ನೂ ಕೆಲವರು ಬ್ಯಾಂಕ್ ಖಾತೆಯನ್ನು ತೆರೆದಿರುವುದಿಲ್ಲ. ಈ ಮಾಹಿತಿಯನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚುರ ಪಡಿಸಲಾಗಿದೆ. ಈ ರೀತಿ ಡಿಬಿಟಿಯಿಂದ ಜುಲೈ-2023ರ ಮಾಹೆಗೆ ವಂಚಿತರಾಗಿರುವ ಪಡಿತರ ಚೀಟಿದಾರರು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದ ನಂತರ ನಿಷ್ಕ್ರೀಯ ಬ್ಯಾಂಕ್ ಖಾತೆಯನ್ನು ಪುನರ್ಜೀವಗೊಳಿಸಿದ ನಂತರ ಹಾಗೂ ಇದುವರೆಗೂ ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಖಾತೆಯನ್ನು ತೆರೆದರೆ ಮುಂದಿನ ಮಾಹೆಯ ಡಿಬಿಟಿಗೆ ಅರ್ಹರಾಗಿರುತ್ತಾರೆ. ಈ ಕಾರ್ಯವನ್ನು ಇದೇ ಜುಲೈ 20ರ ಒಳಗಾಗಿ ಮುಕ್ತಗೊಳಿಸಲು ಸೂಚಿಸಿದೆ.
ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರೆ ವಿವರಗಳನ್ನು http://ahara.kar.nic.in/status2/status_of_dbt.aspx ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‍ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.