ಬೆಳಗಾವಿ : ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ.
ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ಗಂಗವ್ವ ಗೊಡಕುಂದ್ರಿ (31) ಮೃತಪಟ್ಟವರು. ಗಂಗವ್ವ ಅವರು ಜನವರಿ 28 ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 30ರ ರಾತ್ರಿ ಗಂಗವ್ವ ಅವರಿಗೆ ಹೆರಿಗೆ ಆಗಿತ್ತು. ಗಂಗವ್ವ ಅವರಿಗೆ ಬಿಪಿ ಲೋ ಆಗಿ ಸೀರಿಯಸ್ ಮಾಡಬೇಕಿದೆ ಎಂದು ವೈದ್ಯರು ಜ.31ರಂದು ಕುಟುಂಬಸ್ಥರಿಗೆ ತಿಳಿಸಿದ್ದರು.
ಇದಾದ ಸ್ಪಲ್ಪ ಹೊತ್ತಿನ ಬಳಿಕ ಗಂಗವ್ವ ಸಾವನ್ನಪ್ಪಿದ್ದಾರೆ. ನಂತರ ವೈದ್ಯರು ಗಂಗವ್ವ ಕುಟುಂಬಸ್ಥರ ಹತ್ತಿರ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡು ಮೃತದೇಹವನ್ನು ಕೊಟ್ಟು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗಂಗವ್ವ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸಿರಿಯಸ್ ಇದ್ದಾಗ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿದ್ದರೇ ಅಕ್ಕ ಸಾವನ್ನಪ್ಪುತ್ತಿರಲಿಲ್ಲ. ನನ್ನ ಅಕ್ಕನ ಸಾವಿಗೆ ವೈದ್ಯರು ಕಾರಣ ಎಂದು ಗಂಗವ್ವ ಸಹೋದರ ಶಂಕರಪ್ಪ ಆರೋಪ ಮಾಡಿದ್ದಾರೆ.