ಢಾಕಾ : ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ನಾಯಕನನ್ನು ಮತಾಂಧರು ಭೀಕರವಾಗಿ ಸಾಯಿಸಿದ್ದಾರೆ. ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್‌ನ ಬಿರಾಲ್ ಘಟಕದ ಉಪಾಧ್ಯಕ್ಷರಾಗಿದ್ದ ಭಾಬೇಶ್ ಚಂದ್ರ ಅವರನ್ನು ನಿನ್ನೆ ಭೀಕರವಾಗಿ ಕೊಲೆ ಮಾಡಲಾಗಿದೆ. ಭಾಬೇಶ್ ಚಂದ್ರ ಅವರನ್ನು ದಿನಾಜ್‌ಪುರದ ಬಳಿ ಅಪಹರಿಸಿ, ಮನಬಂದಂತೆ ಥಳಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಭಾಬೇಶ್ ಚಂದ್ರ ಅವರನ್ನು ಅಪಹರಣ ಮಾಡಿ ಬಿರಾಲ್‌ನಿಂದ ದಿನಾಜ್‌ಪುರ್ ಮಾರ್ಗವಾಗಿ ನರಾಬರಿ ಗ್ರಾಮಕ್ಕೆ ಕರೆದೊಯ್ದು ಅಮಾನವೀಯವಾಗಿ ಹಲ್ಲೆ ಮಾಡಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮರಳಿ ಮನೆಗೆ ತಂದು ಬಿಟ್ಟಿದ್ದಾರೆ. ತಕ್ಷಣ ಅವರನ್ನು ಬಿರಾಲ್ ಉಪಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ದಿನಾಜ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾಬೇಶ್ ಚಂದ್ರ ಕೊನೆಯುಸಿರೆಳೆದರು ಎಂದು ಭಾಬೇಶ್ ಚಂದ್ರ ಪತ್ನಿ ಶಾಂತನಾ ರಾಯ್ ತಿಳಿಸಿದ್ದಾರೆ.
ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿವೆ. ನೆರೆಯ ದೇಶದಲ್ಲಿ ಹಿಂದೂಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಅತ್ಯಾಚಾರ, ಕೊಲೆ ಮತ್ತು ದೇವಸ್ಥಾನಗಳನ್ನು ಅಪವಿತ್ರಗೊಳಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ತಿಂಗಳು, ಆಯಿನ್ ಓ ಸಲಿಶ್ ಕೇಂದ್ರ (AsK) ಎಂಬ ಮಾನವ ಹಕ್ಕುಗಳ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆ, ದೇವಸ್ಥಾನ ಮತ್ತು ಅಂಗಡಿಗಳ ಮೇಲೆ 147 ದಾಳಿಗಳು ನಡೆದಿದ್ದು, ಸುಮಾರು 408 ಹಿಂದೂ ಮನೆಗಳನ್ನು ಧ್ವಂಸ ಮಾಡಲಾಗಿದೆ. 36 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಅಲ್ಪಸಂಖ್ಯಾತರಿಗೆ ಸೇರಿದ 113 ಅಂಗಡಿಗಳನ್ನು ಹಾಳುಗೆಡವಲಾಗಿದೆ. ಅಹ್ಮದಿಯಾ ಪಂಗಡದ 32 ದೇವಸ್ಥಾನಗಳು ಮತ್ತು ಮಸೀದಿಗಳ ಮೇಲೂ ದಾಳಿ ಮಾಡಲಾಗಿದೆ. 92 ದೇವಸ್ಥಾನಗಳಲ್ಲಿನ ವಿಗ್ರಹಗಳನ್ನು ಒಡೆಯಲಾಗಿದೆ ಎಂದು ತಿಳಿಸಿದೆ.
ಈ ಘಟನೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಎತ್ತಿ ತೋರಿಸುತ್ತದೆ. ಆದರೆ ಮುಹಮ್ಮದ್ ಯೂನಸ್ ಸರ್ಕಾರ ಮಾತ್ರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ತಟೆಗಟ್ಟಲು ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಭಾರತವು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.ಪಾಕಿಸ್ಥಾನಕ್ಕೆ ಹತ್ತಿರವಾಗುತ್ತಿರುವ ಬಾಂಗ್ಲಾದೇಶ, ತನ್ನ ವರ್ತನೆಯಲ್ಲೂ ಪಾಕಿಸ್ಥಾನವನ್ನು ಅನುಸರಿಸುತ್ತಿದೆ ಎಂಬ ಆತಂಕ ಇದೀಗ ಮನೆ ಮಾಡಿದೆ.