ಮುಂಬೈ : ಕಾರನ್ನು ಸ್ಫೋಟಿಸುವುದಾಗಿ ಹಾಗೂ ಮನೆಗೆ ಬಂದು ಅವರನ್ನು ಕೊಲ್ಲುವುದಾಗಿ ದುಷ್ಕರ್ಮಿಗಳಿಂದ ನಟ ಸಲ್ಮಾನ್ ಖಾನ್‌ಗೆ ಮತ್ತೊಂದು ಜೀವ ಬೆದರಿಕೆ ಬಂದಿದೆ.
ಮುಂಬೈನ ವರ್ಲಿಯಲ್ಲಿರುವ ಸಾರಿಗೆ ಇಲಾಖೆಯ ವಾಟ್ಸಾಪ್ ಸಂಖ್ಯೆಗೆ ಕಳುಹಿಸಲಾದ ಸಂದೇಶದ ಮೂಲಕ ಸಲ್ಮಾನ್ ಖಾನ್ ಅವರ ಮನೆಗೆ ನುಗ್ಗಿ ಅವರನ್ನು ಕೊಲ್ಲುವುದಾಗಿ ಮತ್ತು ಅವರ ಕಾರನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಬೆದರಿಕೆ ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಬೆದರಿಕೆಯ ಹೊಣೆಯನ್ನೂ ಯಾರೂ ಹೊತ್ತುಕೊಂಡಿಲ್ಲ. ಸಲ್ಮಾನ್ ಖಾನ್ ಅವರಾಗಲಿ, ಅವರ ಕುಟುಂಬಸ್ಥರಾಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ ಎಂದು ವರದಿಯಾಗಿದೆ. ಇನ್ನು ಬೆದರಿಕೆಯ ಮೂಲ ಮತ್ತು ಸತ್ಯಾಸತ್ಯತೆಯ ಬಗ್ಗೆ ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಸಲ್ಮಾನ್‌ಗೆ ಹಲವು ಬಾರಿ ಬೆದರಿಕೆಗಳು ಬಂದಿವೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ನಿಂದ ನೇರ ಮತ್ತು ಪರೋಕ್ಷವಾಗಿ ಹಲವಾರು ಕೊಲೆ ಬೆದರಿಕೆಗಳು ಬಂದಿವೆ.