ಮಂಡ್ಯ: ಧರ್ಮಸ್ಥಳ ಪ್ರಕರಣದ ಮಾಸ್ಕ್ಮ್ಯಾನ್ನ ಮೊದಲ ಪತ್ನಿ ಆತನ ಬಗ್ಗೆ ಹೇಳಿಕೆ ನೀಡಿದ್ದು, ಆಕೆಯ ಹೇಳಿಕೆ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಮಾಸ್ಕ್ಮ್ಯಾನ್ ಪತ್ನಿ, ಆತ ಮಹಾ ಸುಳ್ಳುಗಾರ, ಮೋಸಗಾರ ಎಂದಿದ್ದಾರೆ. ನಾನು ಅವನ ಜೊತೆ 7 ವರ್ಷ ಸಂಸಾರ ಮಾಡಿದ್ದೆ. ನಮಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ಅವನ ಬಳಿ ಒಂದೇ ಒಂದು ಒಳ್ಳೆಯ ಗುಣಗಳಿರಲಿಲ್ಲ. ನನಗೆ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ. ವಿಚ್ಚೇದನ ವೇಳೆ ಜೀವನಾಂಶ ಕೊಡಲು ಕೆಲಸ ಮಾಡುತ್ತಿಲ್ಲ ಎಂದು ಕೋರ್ಟ್ಗೆ ಸುಳ್ಳು ಹೇಳಿದ್ದ. ಅಲ್ಲು ನನಗೆ ನ್ಯಾಯ ಸಿಗಲಿಲ್ಲ. ನನ್ನ ತಾಯಿಯೇ ನನ್ನ ಮಕ್ಕಳನ್ನು ಪೋಷಿಸಿದರು. ಯಾವಾಗಲೂ ಅಹಂಕಾರದಲ್ಲೇ ಮೆರೆಯುತ್ತಿದ್ದ. ಅಣ್ಣ ತಮ್ಮಂದಿರಿಗೂ ಬಾಯಿಗೆ ಬಂದಹಾಗೇ ಬೈಯ್ಯುತ್ತಿದ್ದ. ಅವನು ಮೋಸಗಾರ, ಸುಳ್ಳುಗಾರ. ಅವನನ್ನು ಬಿಟ್ಟು ಬಂದದ್ದು ಒಳ್ಳೆಯದಾಯಿತು. ಇಟ್ಕೊಂಡಳವಳನ್ನ ಮದುವೆ ಮಾಡಿಕೊಳ್ಳಲು ನನಗೆ ಹಿಂಸೆ ನೀಡಿದ ಎಂದು ಹೇಳಿದ್ದಾರೆ.
ಮದುವೆಯಾದ ಬಳಿಕ 7 ವರ್ಷ ಧರ್ಮಸ್ಥಳದಲ್ಲಿ ಇದ್ದೆವು. ಅಲ್ಲಿ ಕಸ ಗುಡಿಸುವುದು, ಬಾಲ್ ರೂಮ್ ತೊಳೆಯುವುದು ಮಾಡುತ್ತಿದ್ದ. ಆಗ ಹಣದ ಆಸೆಗೆ ಹೀಗೆ ಹೇಳುತ್ತಿರಬಹುದು. ಗುಂಡಿ ತೋಡಿದರೂ ಏನೂ ಸಿಗುತ್ತಿಲ್ಲ ಎಂದರೆ ಇದರಲ್ಲೇನೋ ಕಿತಾಪತಿ ಇರಬಹುದು ಎಂದಿದ್ದಾರೆ. ಧರ್ಮಸ್ಥಳ ಎಂದರೆ ನಮ್ಮೆಲ್ಲರಿಗೂ ಪ್ರೀತಿ. ಆತ ಅತ್ಯಾಚಾರ, ಕೊಲೆಯಾದ ಶವಗಳನ್ನು ಹೂಳಿದ್ದರ ಬಗ್ಗೆ ಯಾವತ್ತೂ ಏನನ್ನೂ ಹೇಳಿಲ್ಲ ಎಂದಿದ್ದಾರೆ.
ಉದ್ಯೋಗ ಕೊಟ್ಟ, ಅನ್ನ ಕೊಟ್ಟ ಸಾಥಳಕ್ಕೆ ಅನ್ಯಾಯ ಮಾಡಬಾರದು. ಯಾವುದೋ ಒತ್ತಡಕ್ಕೆ, ಆಮಿಷಕ್ಕೆ ಒಳಗಾಗಿ ಹೀಗೆ ಮಾಡ್ತಿದ್ದಾನೆ. ದೇವಸ್ಥಾನದ ಹೆಸರು ಕೆಡಿಸುತ್ತಿರುವ ಅವನು ಹಾಳಾಗಬೇಕು. ಅವನು ಸತ್ತು, ಹೆಣ ಆದರೂ ನಾವು ಹೋಗಿ ನೋಡುವುದಿಲ್ಲ. ಮಾಸ್ಕ್ ಮ್ಯಾನ್ ಅಣ್ಣ ಹಾಗೂ ಮನೆಯವರೆಲ್ಲ ಒಳ್ಳೆಯವರು. ಆತ ನನಗೆ ಹೊಡೆದಾಗ ನನ್ನ ಪರವಾಗಿ ಇದ್ದರು. ಈತ ಸರಿ ಇಲ್ಲ. ಅವನನ್ನ ಟಿವಿಯಲ್ಲಿ ನೋಡಿದ ಮೊದಲ ದಿನವೇ ಗೊತ್ತಾಯಿತು. ಅವನ ದೇಹದ ಆಕಾರ ನೋಡಿ ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.