ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 9 ಕರವಸೂಲಿಗಾರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ chitradurga.nic.in ರಲ್ಲಿ ಅರ್ಜಿಯನ್ನು ದೃಢೀಕರಿಸಿದ ಅಗತ್ಯ ದಾಖಲೆಗಳೊಂದಿಗೆ ಫೆ.08 ರ ಒಳಗಾಗಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಮೀಸಲಾತಿ ವಿವರ: ಗ್ರಾಮ ಪಂಚಾಯತಿ ಹಾಗೂ ನಿಗದಿಪಡಿಸಿರುವ ಮೀಸಲಾತಿ ವಿವರ ಇಂತಿದೆ. ಚಳ್ಳಕೆರೆ ತಾಲ್ಲೂಕಿನ ಮೈಲನಹಳ್ಳಿ ಪ.ಜಾತಿ-ಎ(ಇತರೆ). ಹಿರೇಹಳ್ಳಿ ಸಾ.ಅ.(ಇತರೆ). ಸಾಣಿಕೆರೆ, ಸಾ.ಅ. (ಮಹಿಳೆ). ದೊಡ್ಡೇರಿ, ಪ್ರವರ್ಗ-2ಎ (ಇತರೆ). ಜಾಜೂರು, ಸಾ.ಅ. (ಅಂಗವಿಕಲ). ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ, ಪ.ಪಂಗಡ.(ಇತರೆ). ಹೊಸದುರ್ಗ ತಾಲ್ಲೂಕಿನ ತಂಡಗ, ಪ್ರವರ್ಗ-1(ಇತರೆ). ಹೊಳಲ್ಕೆರೆ ತಾಲ್ಲೂಕಿನ ಆರ್.ನುಲೇನೂರು, ಸಾ.ಅ.(ಗ್ರಾಮೀಣ). ಹಿರಿಯೂರು ತಾಲ್ಲೂಕಿನ ಗನ್ನಾಯಕನಹಳ್ಳಿ, ಪ.ಜಾತಿ-ಬಿ(ಇತರೆ) ಬಿಂದುಗಳಿಗೆ ಮೀಸಲಾಗಿವೆ.
ವಿದ್ಯಾರ್ಹತೆ ಹಾಗೂ ಅರ್ಹತೆ: ಕರವಸೂಲಿಗಾರರ ಹುದ್ದೆಗಳ ಅಧಿಸೂಚನೆ ಹೊರಡಿಸುವ ದಿನಾಂಕಕ್ಕೆ ಮೊದಲು ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ತರಬೇತಿ ಕೋರ್ಸ್ ಪಡೆದಿರಬೇಕು. ಫೆ.8ಕ್ಕೆ ಅಭ್ಯರ್ಥಿಯು 18 ವರ್ಷ ಪೂರೈಸಿರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಯಾಗಿರಬೇಕು. ಈ ಕುರಿತು ತಹಶೀಲ್ದಾರರಿಂದ ವಾಸಸ್ಥಳ ಪ್ರಮಾಣ ಪತ್ರ ಪಡೆದಿರಬೇಕು. ನಿಗದಿತ ದಿನಾಂಕದ ಒಳಗೆ ತಹಶೀಲ್ದಾರರಿಂದ ಜಾತಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಇದರೊಂದಿಗೆ ಆಧಾರ್, ರೇಷನ್ ಕಾರ್ಡ್, ವೋಟರ್ ಐಡಿ ದಾಖಲೆಗಳನ್ನು ಸಲ್ಲಿಸಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗೆ 35 ವರ್ಷ, 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಆಯ್ಕೆ ಪ್ರಾಧಿಕಾರವು ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರದಲ್ಲಿ ನಮೂದಿಸಿರುವ ಜನ್ಮ ದಿನಾಂಕವನ್ನು ಪರಿಗಣಿಸಲಿದೆ.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು chitradurga.nic.in ರಲ್ಲಿ ನೀಡಿರುವ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ನೇರವಾಗಿ ವೆಬ್ಸೈಟ್ನಲ್ಲಿ ಮಾತ್ರ ಅಪ್ಲೋಡ್ ಮಾಡಬೇಕು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ವಿವರವಾದ ಮಾಹಿತಿಗಾಗಿ ವೆಬ್ಸೈಟ್ ಸಂಪರ್ಕಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

































