ಬೆಂಗಳೂರು: ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ 750 ಭೂಮಾಪಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದು, ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿದೆ.
ತಾಂತ್ರಿಕ ಕಾರಣದಿಂದಾಗಿ ಅರ್ಜಿ ಸಲ್ಲಿಸದವರು, ಶುಲ್ಕ ಪಾವತಿ ಮಾಡಲಾಗದ ಅಭ್ಯರ್ಥಿಗಳು ಡಿಸೆಂಬರ್ 9 ರವರೆಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬಹುದಾಗಿದೆ. ಈ ಹಿಂದೆ ಉಳಿಕೆ ಮೂಲ ವೃಂದದ 264, ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ 100 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಫೆಬ್ರವರಿ 29ರಂದು ಅಧಿಸೂಚನೆ ಹೊರಡಿಸಲಾಗಿತ್ತು.
ಇದೀಗ ಹೆಚ್ಚುವರಿಯಾಗಿ 386 ಹುದ್ದೆಗಳನ್ನು ಮತ್ತು ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಸೇರ್ಪಡೆ ಮಾಡಲಾಗಿದೆ. ಉಳಿದಂತೆ ಫೆಬ್ರವರಿ 29ರಂದು ಹೊರಡಿಸಿದ ನೇಮಕಾತಿ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕರ್ನಾಟಕ ಲೋಕಸೇವಾ ಆಯೋಗದ https://kpsconline.karnataka.gov.in ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಒಬಿಸಿಗೆ 300 ರು., ಮಾಝಿ ಸೈನಿಕರಿಗೆ 50 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ನೆಟ್ ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಬೇಕಿದೆ.