ಕಾಸರಗೋಡು: ರಾಜಾಪುರ ಎಣ್ಣಪ್ಪಾರದ ವಿದ್ಯಾರ್ಥಿನಿ ಎಂ. ಸಿ ರೇಷ್ಮಾ (17) ಎಂಬಾಕೆಯನ್ನು ಕೊಲೆಗೈದು ನದಿಗೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಹದಿನೈದು ವರ್ಷಗಳ ಬಳಿಕ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಾಣತ್ತೂರಿನ ಬಿಜು ಪೌಲೋಸ್ ಎಂದು ಗುರುತಿಸಲಾಗಿದೆ. ಮಡಿಕೇರಿಯಿಂದ ಈತನನ್ನು ಬಂಧಿಸಲಾಗಿದೆ.
ಕಾಞಾಂಗಾಡ್ನ ಟಿ.ಟಿ.ಸಿ ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದ ರೇಷ್ಮಾ, 2010 ರ ಜೂನ್ 6 ರಂದು ನಾಪತ್ತೆಯಾಗಿದ್ದಳು. ಈ ಬಗ್ಗೆ ಮನೆಯವರು ಅಂಬಲತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಲಿಲ್ಲ. ಈ ಹಿನ್ನಲೆಯಲ್ಲಿ ಮನೆಯವರು ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ಹೈಕೋರ್ಟ್ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಿ ಆದೇಶ ನೀಡಿತ್ತು. ಕ್ರೈಂ ಬ್ರಾಂಚ್ ಪೊಲೀಸರು ಬಿಜು ಪೌಲೋಸ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ರೇಷ್ಮಾಳನ್ನು ಕೊಲೆಗೈದು ನದಿಗೆ ಎಸೆದಿರುವುದಾಗಿ ತಿಳಿಸಿದ್ದನು. ಈ ಹಿನ್ನಲೆಯಲ್ಲಿ ಹೊಳೆಯಲ್ಲಿ ಶೋಧ ನಡೆಸಿದರೂ ಮೃತದೇಹ ಪತ್ತೆಯಾಗಲಿಲ್ಲ. ಈ ನಡುವೆ ಹೊಳೆಯಿಂದ ಲಭಿಸಿದ ಎಲುಬು ಡಿ ಎನ್ ಎ ಪರೀಕ್ಷೆ ನಡೆಸಿದಾಗ ರೇಷ್ಮಾಳದ್ದು ಎಂದು ತಿಳಿದು ಬಂದಿದ್ದು, ಬಳಿಕ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ಅತ್ಯಾಚಾರ ನಡೆಸಿರುವುದಾಗಿ ಈತ ತಪ್ಪೊಪ್ಪಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಿಂದ ಈತನನ್ನು ತನಿಖಾ ತಂಡ ಬಂಧಿಸಿದೆ. ವೈಜ್ಞಾನಿಕ ದಾಖಲೆಗಳನ್ನು ಆಧರಿಸಿ ನಡೆಸಿದ ತನಿಖೆಯಿಂದ ಆರೋಪಿಯಿಂದ ಕೆಲ ಮಾಹಿತಿಗಳು ಪೊಲೀಸರಿಗೆ ಲಭಿಸಿದೆ.
ಪೊಲೀಸ್ ತನಿಖೆ ಅಸಮರ್ಪಕವಾಗಿತ್ತು. ಇದರಿಂದ ತನಿಖೆ ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿತ್ತು. ಅಂಬಾಲತ್ತರ ಠಾಣಾ ಪೊಲೀಸರು ತನಿಖೆ ನಡೆಸಿದ್ದರೂ ಸಾಕ್ಷ್ಯಗಳ ಕೊರತೆಯಿಂದ ಆರೋಪಿಯನ್ನು ಬಂಧಿಸಿರಲಿಲ್ಲ. ತನಿಖೆಯು ಮೂಲೆ ಗುಂಪಾಗುವ ಸಾಧ್ಯತೆ ಇತ್ತು . ಆದರೆ ಕುಟುಂಬಸ್ಥರು ಹಾಗೂ ದಲಿತ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಕ್ರೈಂ ಬ್ರಾಂಚ್ ತನಿಖೆ ಮೂಲಕ ಕೃತ್ಯ ಬೆಳಕಿಗೆ ಬರಲು ಕಾರಣವಾಗಿದೆ. ಆರೋಪಿ ವಿದ್ಯಾರ್ಥಿ ಜೊತೆ ತಂಗಿದ್ದ ಮಡಿಯಾನ್ ಹಾಗೂ ವಡಗರ ಮುಕ್ಕೂಲ್ ಎಂಬಲ್ಲಿನ ಬಾಡಿಗೆ ಕ್ವಾಟ್ರಸ್ನಲ್ಲೂ ಆರೋಪಿಯ ಕರೆದೊಯ್ದು ಮಾಹಿತಿ ಕಲೆ ಹಾಕಿದೆ.