ಕೊಪ್ಪಳ : ಪ್ರವಾಸಿಗರ ಮೇಲೆ ಹಲ್ಲೆ ಮತ್ತು ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಇಂದು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ಮಲ್ಲೇಶ್(22), ಚೇತನ್‌ಸಾಯಿ ಸಿಳ್ಳೇಕ್ಯಾತರ್(21) ಮತ್ತು ಸಾಯಿರಾಮ್ ಬಂಧಿತ ಆರೋಪಿಗಳು.
ಮೂವರು ಆರೋಪಿಗಳ ಪೈಕಿ ಮಲ್ಲೇಶ್ ಮತ್ತು ಚೇತನ್‌ಸಾಯಿ ಎಂಬ ಆರೋಪಿಗಳನ್ನು ನಿನ್ನೆ ಬಂಧಿಸಲಾಗಿತ್ತು. ಆದರೆ ಮೂರನೇ ಆರೋಪಿ ಸಾಯಿರಾಮ್ ಮಾತ್ರ ಪರಾರಿಯಾಗಿದ್ದ. ನಾಪತ್ತೆಯಾದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಆತ ನೆರೆಯ ತಮಿಳುನಾಡಿಗೆ ಪರಾರಿಯಾದ ಬಗ್ಗೆ ಮಾಹಿತಿ ದೊರೆತಿತ್ತು.
ಈ ಹಿನ್ನೆಲೆ ಪೊಲೀಸರ ಒಂದು ತಂಡ ತಮಿಳುನಾಡಿಗೆ ಹೋಗಿದ್ದರು. ಈಗಾಗಲೇ ಬಂಧಿತ ಇಬ್ಬರು ಆರೋಪಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ೩ನೇ ಆರೋಪಿಯ ಮೊಬೈಲ್ ನಂಬರ್ ಸೇರಿ ಅನೇಕ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದರು. ಆ ಮೂಲಕ ಆತನನ್ನು ಅರೆಸ್ಟ್ ಮಾಡಲಾಗಿದೆ.