ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ತವರು ಪ್ರದೇಶದಲ್ಲಿ, ಗುಬ್ಬಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷನನ್ನು ಹನಿಟ್ರ್ಯಾಪ್ ಮಾಡಿ 20 ಲಕ್ಷ ರೂಪಾಯಿ ವಸೂಲಿ ಮಾಡಲು ಯತ್ನಿಸಿದ್ದ ಯುವತಿ ನಿಶಾ ಹಾಗೂ ಆಕೆಯ ಗ್ಯಾಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಅಧ್ಯಕ್ಷ ಅಣ್ಣಪ್ಪಸ್ವಾಮಿಗೆ ಫೇಸ್‌ಬುಕ್ ಮೂಲಕ ಪರಿಚಯವಾಗಿ, ಹನಿಟ್ರ್ಯಾಪ್ ಗ್ಯಾಂಗ್ ನಿಷಾ ಮೊದಲು ಸ್ನೇಹ ಬೆಳೆಸಿ ಬಳಿಕ ಪ್ರೀತಿಯ ನಾಟಕವಾಡಿದ್ದಳು. ನಂತರ ಅಣ್ಣಪ್ಪಸ್ವಾಮಿಯನ್ನು ಲಾಡ್ಜ್‌ಗೆ ಕರೆದೊಯ್ದು ಬೆತ್ತಲೆ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋವನ್ನಾಧಾರವಾಗಿ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟು, ನೀಡದಿದ್ದರೆ ರೇಪ್ ಕೇಸ್ ಹಾಕಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಘಟನೆಯಿಂದ ಆತಂಕಗೊಂಡ ಅಣ್ಣಪ್ಪಸ್ವಾಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ನಿಶಾ, ಆಕೆಯ ಸ್ನೇಹಿತೆ ಜ್ಯೋತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಗ್ಯಾಂಗ್‌ನ ಭಾಗಿಯಾಗಿದ್ದ ಗುಬ್ಬಿಯ ಬಸವರಾಜು ಹಾಗೂ ಭರತ್ ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ವಿಚಾರಣೆ ವೇಳೆ, ಈ ಮೊದಲು ನಡೆದ ಕುರಿಮೂರ್ತಿ ಕೊಲೆ ಪ್ರಕರಣದಲ್ಲಿಯೂ ಬಸವರಾಜು ಮತ್ತು ಭರತ್ ಆರೋಪಿಯಾಗಿರುವುದು ಬೆಳಕಿಗೆ ಬಂದಿದೆ.
ಈ ಹಿಂದೆ ಬಿಜೆಪಿಯಿಂದ ಪಟ್ಟಣ ಪಂಚಾಯತಿ ಅಧ್ಯಕ್ಷನಾಗಿದ್ದ ಅಣ್ಣಪ್ಪಸ್ವಾಮಿ, ಗುಬ್ಬಿ ತಾಲೂಕಿನಲ್ಲಿ ನಡೆದ ಸಾವಿರಾರು ಎಕರೆ ಸರ್ಕಾರಿ ಜಮೀನು ಗೋಲ್ಮಾಲ್ ಕೇಸಿನಲ್ಲಿ ಎ2 ಆರೋಪಿಯಾಗಿದ್ದಾರೆ.ಅಧ್ಯಕ್ಷನಾಗಿದ್ದ ವೇಳೆ 3 ತಿಂಗಳು ತಲೆಮರಿಸಿಕೊಂಡಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.