ಜೈಪುರ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಮತ್ತೋರ್ವ ಶಂಕಿತನನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ.
ಬಂಧಿತ ಆರೋಪಿಯನ್ನು ರಾಜಸ್ಥಾನದ ಜೈಸಲ್ಮೇರ್‌ನ ಚಂದನ್ ಗ್ರಾಮದ ನಿವಾಸಿ ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಬಂಧಿತ ವ್ಯಕ್ತಿ ಜೈಸಲ್ಮೇರ್‌ನ ಡಿಆರ್‌ಡಿಒ ಅತಿಥಿ ಗೃಹದಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ. ಮಿಲಿಟರಿ ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ವಿಜ್ಞಾನಿಗಳ ವಾಸ್ತವ್ಯಕ್ಕೆ ಈ ಅತಿಥಿ ಗೃಹ ಮುಖ್ಯ ಸ್ಥಳವಾಗಿದೆ.
ಮಹೇಂದ್ರ ಸಿಂಗ್ ಮೇಲೆ ಗಡಿಯಾಚೆಗಿನ ಪೋಖ್ರಾನ್ ಫೈರಿಂಗ್ ರೇಂಜ್‌ನಂತಹ ಸೂಕ್ಷ್ಮ ಮಿಲಿಟರಿ ಪ್ರದೇಶಗಳ ಬಗ್ಗೆ ಮಾಹಿತಿಯನ್ನು ಪಾಕ್‌ಗೆ ರವಾನಿಸಿದ್ದ ಎಂಬ ಆರೋಪವಿದೆ. ಶಂಕಿತನ ಮೊಬೈಲ್ ಚಾಟ್‌ಗಳಿಂದ ಅನೇಕ ಪ್ರಮುಖ ಮತ್ತು ಗೌಪ್ಯ ಮಾಹಿತಿಯ ಸೋರಿಕೆಯ ಪುರಾವೆಗಳು ಕಂಡುಬಂದಿವೆ.
ಮಹೇಂದ್ರ ಸಿಂಗ್‌ನನ್ನು ಬಹಳ ಸಮಯದಿಂದ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಆತನನ್ನು ಬಂಧಿಸಿದ ನಂತರ, ಭದ್ರತಾ ಸಂಸ್ಥೆಗಳು ಮತ್ತು ಮಿಲಿಟರಿ ಗುಪ್ತಚರ ಇಲಾಖೆ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿವೆ.
ಮೂರು ತಿಂಗಳ ಹಿಂದೆ, ಜೈಸಲ್ಮೇರ್‌ನಲ್ಲೇ ಬೇಹುಗಾರಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆ ಸಮಯದಲ್ಲಿ ರಾಜಸ್ಥಾನ ಸರ್ಕಾರದ ಮಾಜಿ ಸಚಿವರ ಪಿಎ ಶಕೂರ್ ಖಾನ್‌ನನ್ನು ಭದ್ರತಾ ಸಂಸ್ಥೆಗಳು ಬಂಧಿಸಿದ್ದವು.
ಗಡಿ ಪ್ರದೇಶಗಳಲ್ಲಿ ನಡೆಯುವ ಸರ್ಕಾರಿ ಸಭೆಗಳಿಗೆ ಹಾಜರಾಗುವ ನೆಪದಲ್ಲಿ ಶಕೂರ್ ಖಾನ್ ಭಾರತೀಯ ಸೇನೆಯ ಚಟುವಟಿಕೆಗಳು ಮತ್ತು ಕಾರ್ಯತಂತ್ರದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ವಿಚಾರಣೆಯ ಸಮಯದಲ್ಲಿ, ಆತ 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಸಿಂಧ್ ಪ್ರಾಂತ್ಯದ ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಘೋಟ್ಕಿ ಪ್ರದೇಶಗಳಲ್ಲಿ ಆತನಿಗೆ ಸಂಬಂಧಿಕರಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದಿಂದ ಅಪಾರ ಪ್ರಮಾಣದ ಹಣವನ್ನು ಪಡೆದ ಆರೋಪವೂ ಆತನ ಮೇಲಿದೆ. ಹಣವನ್ನು ಆತನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ಸಹ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.