ಜೈಪುರ : ಪಾಕಿಸ್ತಾನದ ಐಎಸ್ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನದ ಸರ್ಕಾರಿ ನೌಕರನನ್ನ ಜೈಸಲ್ಮೇರ್ನಲ್ಲಿ ಅರೆಸ್ಟ್ ಮಾಡಲಾಗಿದೆ.
ಬಂಧಿತ ಸರ್ಕಾರಿ ನೌಕರನನ್ನು ಶಕುರ್ ಖಾನ್ ಮಂಗನಿಯಾರ್ ಎಂದು ಗುರುತಿಸಲಾಗಿದೆ. ಜೈಸಲ್ಮೈರ್ನಲ್ಲಿರುವ ಕಚೇರಿಯಲ್ಲೇ ಸಿಐಡಿ ಮತ್ತು ಗುಪ್ತಚರ ಸಂಸ್ಥೆಗಳ ತಂಡವು ಜಂಟಿಯಾಗಿ ಬಂಧಿಸಿವೆ.
ರಾಜಸ್ಥಾನದಲ್ಲಿ ಸರ್ಕಾರಿ ನೌಕರನಾಗಿದ್ದ ಶಕುರ್ ಖಾನ್ ಗಡಿ ಪ್ರದೇಶದ ಬರೋಡಾ ಗ್ರಾಮದವನು. ಈತನ ಮೇಲೆ ಬಹಳ ದಿನಗಳಿಂದ ನಿಗಾ ಇಡಲಾಗಿತ್ತು. ಸದ್ಯ ಹೆಚ್ಚಿನ ವಿಚಾರಣೆಗಾಗಿ ಜೈಪುರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎರಡೂ ತನಿಖಾ ತಂಡಗಳು ಜಂಟಿಯಾಗಿಯೇ ವಿಚಾರಣೆ ನಡೆಸಲಿವೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್ನೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.
ಅಲ್ಲದೇ ಪಾಕಿಸ್ತಾನಕ್ಕೆ ಸಂಬಂಧಿಸಿದ ಹಲವಾರು ಫೋನ್ ಸಂಖ್ಯೆಗಳು (+92 ರಿಂದ ಪ್ರಾರಂಭವಾಗುವ ಮೊಬೈಲ್ ಸಂಖ್ಯೆಗಳು) ಇತನ ಮೊಬೈಲ್ನಲ್ಲಿ ಪತ್ತೆಯಾಗಿದೆ. ಜೊತೆಗೆ ಕಳೆದ ಕೆಲ ವರ್ಷಗಳಲ್ಲಿ 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದಾಗಿ ಶಕುರ್ ಖಾನ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಎಂದು ವರದಿಯಾಗಿದೆ.