ಬುಡ್ಗಾಮ್ : 26 ಜನರ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ಕೆಲವು ದಿನಗಳ ನಂತರ, ಬುಡ್ಗಾಮ್ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶ್ರೀನಗರದ ಹೊರವಲಯದಲ್ಲಿರುವ ಬುಚ್‌ಪೋರಾ ಪಟ್ಟಣದಲ್ಲಿ ನಾಕಾ ತಪಾಸಣೆ ಕಾರ್ಯಾಚರಣೆಯ ಸಂದರ್ಭದಲ್ಲಿ ಭಯೋತ್ಪಾದಕ ಸಹಚರರನ್ನು ಬಂಧಿಸಲಾಗಿದೆ.
ಪೂಂಚ್‌ನಲ್ಲಿ ಭಯೋತ್ಪಾದಕ ಅಡಗುತಾಣವನ್ನು ಪತ್ತೆಹಚ್ಚಲಾಗಿದೆ. ಪೂಂಚ್ ಜಿಲ್ಲೆಯ ಸುರನ್‌ಕೋಟ್ ಸೆಕ್ಟರ್‌ನ ಹರಿ ಮರೋಟೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿವೆ.
ಎರಡು ವೈರ್‌ಲೆಸ್ ಸೆಟ್‌ಗಳು, ಯೂರಿಯಾ ಹೊಂದಿರುವ ಐದು ಪ್ಯಾಕೆಟ್‌ಗಳು, ಒಂದು ಐದು ಲೀಟರ್ ಗ್ಯಾಸ್ ಸಿಲಿಂಡರ್, ಒಂದು ಬೈನಾಕ್ಯುಲರ್, ಮೂರು ಉಣ್ಣೆಯ ಕ್ಯಾಪ್‌ಗಳು, ಮೂರು ಕಂಬಳಿಗಳು ಮತ್ತು ಪಾತ್ರೆಗಳನ್ನು ಅಡಗುತಾಣದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.