ಇಂಫಾಲ : ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯಲ್ಲಿ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಉಗ್ರರನ್ನು ಬಂಧಿಸಲಾಗಿದ್ದು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ನಿಷೇಧಿತ ಸಂಘಟನೆ ಕಂಗ್ಲೆ ಯಾವೋಲ್ ಕನ್ನಾ ಲುಪ್‌ನ ಸದಸ್ಯ ಓಯಿನಮ್ ರಬಿಚಂದ್ರ ಸಿಂಗ್ (33) ಎಂಬಾತನನ್ನು ಸಾವೊಂಬಂಗ್ ಪ್ರದೇಶದಲ್ಲಿ ಬಂಧಿಸಲಾಗಿದೆ.
ಜೊತೆಗೆ ಆಂಡ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೋಧ ನಡೆಸಲಾಗಿದ್ದು, ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸಂಘಟನೆಯ ಕಾರ್ಯಕರ್ತನಾದ ಮುತುಮ್ ಕಾಮೈ ಬಡಾಲ್ (40)ನನ್ನು ಬಂಧಿಸಲಾಗಿದೆ. ಕೈರಾಂಗ್ ಗ್ರಾಮದಲ್ಲಿ ಕಾಂಗ್ರೆಪಾಕ್ ಕಮ್ಯುನಿಸ್ಟ್ ಪಕ್ಷದ ಸದಸ್ಯ ಮೊಹಮ್ಮದ್ ಇಸ್ರಾಕ್ ಖಾನ್ ಅಲಿಯಾಸ್ ಪೋಪೋ (21) ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಂಧಿತ ಉಗ್ರರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಂಧಿತ ಉಗ್ರರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.