ಢಾಕಾ : ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಟಾರ್ ಆಟಗಾರ ಬಾಂಗ್ಲಾದೇಶದ ದಿಗ್ಗಜ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರ ವಿರುದ್ಧ ಢಾಕಾದ ನ್ಯಾಯಾಲಯವು ಭಾನುವಾರ ಬಂಧನ ವಾರಂಟ್ ಹೊರಡಿಸಿದೆ.
ಐಎಫ್ಐಸಿ ಬ್ಯಾಂಕ್ಗೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಂಗ್ಲಾದೇಶದ ಆಲ್ರೌಂಡರ್ ಮತ್ತು ರಾಜಕಾರಣಿ ಶಕೀಬ್ ಅಲ್ ಹಸನ್ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ಇನ್ನು ಮೂವರ ವಿರುದ್ಧವೂ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಢಾಕಾದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಿಯಾದೂರ್ ರೆಹಮಾನ್ ಈ ತೀರ್ಪು ನೀಡಿದ್ದಾರೆ.
2024ರ ಡಿ. 15ರಂದು ಚೆಕ್ ಬೌನ್ಸ್ ಪ್ರಕರಣದಲ್ಲಿ ಶಾಕಿಬ್ ಹೆಸರು ಕೇಳಿ ಬಂದಿತ್ತು. ಇದಾದ ಬಳಿಕ ಡಿ.18ರಂದು ಪ್ರಾಥಮಿಕ ವಿಚಾರಣೆ ನಡೆದ ನಂತರ ಜ. 19ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣದಲ್ಲಿ ಶಕೀಬ್ ಅಲ್ಲದೆ ಅವರ ಒಡೆತನದ ಕಂಪನಿ ಅಲ್ ಹಸನ್ ಆಗ್ರೋ ಫಾರ್ಮ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಘಾಜಿ ಶಹಗೀರ್ ಹುಸೇನ್ ಮತ್ತು ನಿರ್ದೇಶಕರಾದ ಇಮ್ದಾದುಲ್ ಹಕ್ ಮತ್ತು ಮಲೈಕರ್ ಬೇಗಂ ಕೂಡ ಭಾಗಿಯಾಗಿರುತ್ತಾರೆ.
ಐಎಫ್ಐಸಿ ಬ್ಯಾಂಕ್ನ ಅಧಿಕಾರಿ ಶಾಹಿಬುರ್ ರೆಹಮಾನ್ ಅವರು ಬ್ಯಾಂಕ್ ಪರ ಪ್ರಕರಣ ದಾಖಲಿಸಿದ್ದರು. ಅದರ ಪ್ರಕಾರ, ಶಕೀಬ್ ಅಲ್ ಹಸನ್ ಮತ್ತು ಇತರ ಮೂವರು ಎರಡು ಪ್ರತ್ಯೇಕ ಚೆಕ್ಗಳ ಮೂಲಕ ಸರಿಸುಮಾರು 41.4 ಮಿಲಿಯನ್ ಟಾಕಾ ಅಂದರೆ ಸರಿಸುಮಾರು 3 ಕೋಟಿ ಭಾರತೀಯ ರೂಪಾಯಿಗಳನ್ನು ಪಾವತಿ ಮಾಡಬೇಕಿತ್ತು. ಆದರೆ ಇದುವರೆಗೂ ಹಣ ಪಾವತಿಯಾಗದ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.