ಬೆಂಗಳೂರು : ನಿಷೇಧಿತ ಪಿಎಫ್‌ಐ ಉಗ್ರ ಸಂಘಟನೆಯ ಕೃತ್ಯಗಳಿಗೆ ದುಬೈನಿಂದ ಬರುತ್ತಿದ್ದ ಹಣವನ್ನು ಕರ್ನಾಟಕ ಹಾಗೂ ಕೇರಳದಲ್ಲಿನ ತಂಡಗಳ ಮೂಲಕ ಹಂಚುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೊಹಮ್ಮದ್ ಸಜ್ಜದ್ ಆಲಂ ಬಂಧಿತ ಆರೋಪಿ. ಈತ ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಅರೆಸ್ಟ್ ಮಾಡಲಾಗಿದೆ.
ಪಿಎಫ್‌ಐ ತರಬೇತಿ ಪಡೆದ ಕೇಡರ್ ಆಲಂ ವಿರುದ್ಧ ಬಂಧನ ವಿಶೇಷ ಎನ್‌ಐಎ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಅವರ ವಿರುದ್ಧ ಲುಕ್‌ಔಟ್ ನೊಟೀಸ್ (ಎಲ್‌ಒಸಿ) ಕೂಡ ಜಾರಿಮಾಡಲಾಗಿತ್ತು ಎಂದು ಎನ್‌ಐಎ ಹೇಳಿದೆ.
ಆರೋಪಿಯು ದುಬೈನಿಂದ ಬಿಹಾರದ ಪಿಎಫ್‌ಐ ಕಾರ್ಯಕರ್ತರಿಗೆ ಬರುತ್ತಿದ್ದ ದುಡ್ಡನ್ನು ಕರ್ನಾಟಕ ಮತ್ತು ಕೇರಳ ಮೂಲದ ತಂಡಗಳ ಮೂಲಕ ಅಕ್ರಮವಾಗಿ ಹಂಚುತ್ತಿದ್ದ. ನಿಷೇಧಿತ ಸಂಘಟನೆಯ ಅಪರಾಧ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸಲು ಹಣವನ್ನು ಬಳಸಲಾಗಿತ್ತು ಎಂದು ಎನ್‌ಐಎ ತಿಳಿಸಿದೆ.
ಪಿಎಫ್‌ಐ ಕಾರ್ಯಕರ್ತರು ಕಾನೂನುಬಾಹಿರ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ 2022 ರ ಜುಲೈನಲ್ಲಿ ಬಿಹಾರದ ಫುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು.