ಚಿತ್ರದುರ್ಗ : ಲೇಖನಗಳಿಗೆ ಸಮಾಜ ಸುಧಾರಿಸುವ ಶಕ್ತಿಯಿದೆ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಹೇಳಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ರೋಟರಿ ಕ್ಲಬ್ ಚಿತ್ರದುರ್ಗ ಇವುಗಳ ಸಹಯೋಗದೊಂದಿಗೆ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಚಿನ್ಮುಲಾದ್ರಿ ಸಾಹಿತ್ಯ ವೇದಿಕೆಯ 19 ನೇ ವಾರ್ಷಿಕೋತ್ಸವ, ಡಾ.ಆರ್.ಗೌರಮ್ಮನವರ ಚೊಚ್ಚಲ ಕೃತಿ ಕಾವ್ಯದೀಪ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಮೈಸೂರು ದಸರಾ ನಾಡ ಹಬ್ಬ ಉದ್ಗಾಟನೆಗೆ ಪ್ರತಿಷ್ಠಿತಿ ಬೂಕರ್ ಪ್ರಶಸ್ತಿ ಪುರಸ್ಕøತೆ ಭಾನು ಮುಷ್ತಾಕ್ರನ್ನು ರಾಜ್ಯ ಸರ್ಕಾರ ಆಹ್ವಾನಿಸಿರುವುದಕ್ಕೆ ಕೆಲವರು ವಿರೋಧಿಸುತ್ತಿರುವುದು ಸರಿಯಲ್ಲ. ನಾಡ ಹಬ್ಬ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿರಬಾರದು ಎಂದರು.
ಡಾ.ಗೌರಮ್ಮನವರ ಚೊಚ್ಚಲ ಕೃತಿ ಅರ್ಥಗರ್ಭಿತವಾಗಿ ಮೂಡಿ ಬಂದಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಅವರು ಸಾಹಿತ್ಯದಲ್ಲಿ ಆಸಕ್ತಿ ವಹಿಸಿರುವುದು ನಿಜಕ್ಕೂ ಮೆಚ್ಚುವಂತದ್ದು ಎಂದು ಸಂತಸ ವ್ಯಕ್ತಪಡಿಸಿದರು.
ಸಂಶೋಧಕ ಡಾ.ಬಿ.ರಾಜಶೇಖರಪ್ಪ ಕೃತಿಯ ಕುರಿತು ಮಾತನಾಡುತ್ತ ಸಾಹಿತ್ಯ ಯಾರಿಗೂ ಮೀಸಲಲ್ಲ. ಎಲ್ಲರಿಗೂ ಸೇರಿದ್ದು, ಜೀವನದ ಪಕ್ವ ಅನುಭವ ಯಾರಿಗೆಲ್ಲಾ ಆಗಿದೆಯೋ ಅವರೆಲ್ಲಾ ಸಾಹಿತಿ, ಲೇಖಕರಾಗಬಹುದು. ಕಾವ್ಯ ಎಂದರೆ ಕವಿ ಬರೆದಿರುವ ಪದ್ಯದ ಸಾಲುಗಳಲ್ಲಿರುತ್ತದೆ. ಕಂಡುಕೊಳ್ಳಬೇಕಾದುದು ವಿಮರ್ಶಕರ ಕರ್ತವ್ಯ. ಕಾವ್ಯ ಓದಿದಾಗ ಚಿತ್ರ ಮರು ಮೂಡಬೇಕು. ಸೂಕ್ಷ್ಮವಾದ ಮಾನಸಿಕ ವಿದ್ಯಮಾನವೇ ಕಾವ್ಯ ಎಂದು ತಿಳಿಸಿದರು.
ಕವನಕ್ಕೆ ಸಂಕ್ಷಿಪ್ತತೆಯಿರಬೇಕು. ಪ್ರತಿಫಲನವಿಲ್ಲದಿದ್ದರೆ ಕಾವ್ಯವಾಗುವುದಿಲ್ಲ. ಕವಿ, ಕಾವ್ಯಕ್ಕೆ ಗೆದ್ದೆ ಗೆಲ್ಲುತ್ತೇನೆಂಬ ಆಶಾಭಾವವಿರಬೇಕು. ಭಾವನೆಗಳನ್ನು ಹಿಡಿದಿಡುವುದು ಕಷ್ಟದ ಕೆಲಸ. ಡಾ.ಆರ್.ಗೌರಮ್ಮನವರು ಎಲ್ಲಿಯೂ ತ್ರಾಸವಿಲ್ಲದೆ ಕಾವ್ಯಗಳನ್ನು ರಚಿಸಿದ್ದಾರೆಂದು ಶ್ಲಾಘಿಸಿದರು.
ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ರಕ್ತದಾನಿ ಡಾ.ಟಿ.ತ್ಯಾಗರಾಜ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಅನುಭವದ ಹೂರಣವೆ ಕಾವ್ಯ. ಕವನ, ಕವಿತೆಗಳನ್ನು ಬರೆಯುವರಿಗೆ ಪ್ರೋತ್ಸಾಹ ಬೇಕಿದೆ. ಕವಿಗಳು ಎಂದು ಗೊತ್ತಾಗಬೇಕಾದರೆ ಕವನಗಳು ಪುಸ್ತಕದ ರೂಪದಲ್ಲಿ ಹೊರ ಬರಬೇಕು. ರಕ್ತದಾನ ಮಹಾದಾನ. ಕಳೆದ 36 ವರ್ಷಗಳಿಂದ ಇದುವರೆವಿಗೂ 101 ಸಾರಿ ರಕ್ತದಾನ ಮಾಡಿ ಅಮೂಲ್ಯವಾದ ಜೀವ ಉಳಿಸಿದ್ದೇನೆ. 65 ವರ್ಷದೊಳಗಿನ ಆರೋಗ್ಯವಂತರೆಲ್ಲಾ ರಕ್ತದಾನ ಮಾಡಿ ಎಂದು ವಿನಂತಿಸಿದರು.
ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ಮಾತನಾಡುತ್ತ ಋಷಿ ಮುನಿಗಳು ತಪಸ್ಸು ಮಾಡಿ ಇಷ್ಟ ದೇವತೆಗಳನ್ನು ಪ್ರತ್ಯಕ್ಷವಾಗಿ ಕಾಣುತ್ತಿದ್ದರು. ಸಾಹಿತ್ಯ ಹೊರ ಬರಬೇಕಾದರೆ ಹಲವಾರು ಸನ್ನಿವೇಶ, ಜೀವನಗಳಲ್ಲಿನ ಅನುಭವ ಕಾರಣವಾಗುತ್ತದೆ. ಅಂತಹ ಅಭಿವ್ಯಕ್ತಿ ಡಾ.ಗೌರಮ್ಮನವರಲ್ಲಿ ಅಡಗಿರುವುದರಿಂದ ಕಾವ್ಯ ದೀಪ ಕೃತಿಯನ್ನು ಹೊರತರಲು ಸಾಧ್ಯವಾಗಿದೆ ಎಂದು ನುಡಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿ ಇಂಗ್ಲಿಷ್ ಪುಸ್ತಕಗಳನ್ನು ಓದುವವರ ಸಂಖ್ಯೆ ಜಾಸ್ತಿಯಾಗಿದೆ. ಕನ್ನಡ ಪುಸ್ತಕಗಳನ್ನು ಓದುವವರು ವಿರಳವಾಗಿದ್ದಾರೆ. ಪ್ರತಿಷ್ಠೆಗಾಗಿಯಾದರೂ ಪೋಷಕರುಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಲ್ಲಿ ಓದಿಸುತ್ತಾರೆ. ಸಾಹಿತ್ಯದ ಆಳ ಎಲ್ಲಿದೆ. ಕಾವ್ಯ, ಕವನ, ಕಾದಂಬರಿ, ಕಥೆ ಬರಯಲು ವಸ್ತುವಿರಬೇಕು. ಜೀವನಾನುಭವ ಹೊಳೆ ರೀತಿ ಹರಿಯುತ್ತಿರುತ್ತದೆ ಎಂದರು.
ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷೆ ದಿಲ್ಶಾದ್ ಉನ್ನಿಸ ಅಧ್ಯಕ್ಷತೆ ವಹಿಸಿದ್ದರು.
ಸಮೂಹ ಸಂವಹನ ಉಡುಪಿಯ ಚನ್ನಬಸವ ಪುತ್ತೂರ್ಕರ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಶಫಿವುಲ್ಲಾ, ಕಾವ್ಯದೀಪ ಕೃತಿಕಾರರಾದ ಡಾ.ಆರ್.ಗೌರಮ್ಮ
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್, ಗಾಯತ್ರಿ ಶಿವರಾಂ ಇವರುಗಳು ವೇದಿಕೆಯಲ್ಲಿದ್ದರು.
ಮಮತಾ ಕೆ.ಹೆಚ್.ಪ್ರಾರ್ಥಿಸಿದರು. ಡಾ.ನವೀನ್ ಬಿ.ಸಜ್ಜನ್ ಸ್ವಾಗತಿಸಿದರು. ಮಹಮದ್ ಸಾದತ್ ವಂದಿಸಿದರು. ಡಾ.ನವೀನ್ ಮಸ್ಕಲ್ ನಿರೂಪಿಸಿದರು.