ಅರುಣಾಚಲ ಪ್ರದೇಶ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನೇಕರು ಇತರ ಅಭ್ಯರ್ಥಿಗಳಿಗೆ ಮಾದರಿಯಾಗಿರುತ್ತಾರೆ. ಹೀಗೆ ಅರುಣಾಚಲ ಪ್ರದೇಶದ ಮೊದಲ ಐಪಿಎಸ್ ಅಧಿಕಾರಿಯಾಗುವ ಮೂಲಕ ಇತಿಹಾಸ ನಿರ್ಮಿಸಿರುವ ಟೆನ್ಜಿನ್ ಯಾಂಗ್ಕಿ ಅವರ ಯಶೋಗಾಥೆ ಇದು.
ಟೆನ್ಜಿನ್ ಯಾಂಗ್ಕಿ ಅವರು ಅರುಣಾಚಲ ಪ್ರದೇಶದ ತವಾಂಗ್ ನಿವಾಸಿ. ಅವರ ದಿವಂಗತ ತಂದೆ, ಥುಪ್ಟೆನ್ ಟೆಂಪಾ, ಮಾಜಿ ಐಎಎಸ್ ಅಧಿಕಾರಿ ಮತ್ತು ಸಚಿವರಾಗಿದ್ದರು. ಮತ್ತು ಅವರ ತಾಯಿ ನಿವೃತ್ತ ಸರ್ಕಾರಿ ಕಾರ್ಯದರ್ಶಿಯಾಗಿದ್ದರು. ಹೀಗಾಗಿ ಯಾಂಗ್ಕಿಯವರಿಗೆ ಚಿಕ್ಕ ವಯಸ್ಸಿನಿಂದಲೇ ಆಡಳಿತದ ಜಗತ್ತಿನ ಪರಿಚಯವಿತ್ತು.
ಯಾಂಗ್ಕಿ ಅಸ್ಸಾಂನಲ್ಲಿ ಶಾಲಾ ಶಿಕ್ಷಣ ಮತ್ತು ಪದವಿ ಪಡೆದರು ಮತ್ತು ನಂತರ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಜವಾಹರಲಾಲ್ ನೆಹರು ಕಾಲೇಜಿನಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಇಂಗ್ಲೆಂಡ್‌ನ ವಾರ್ವಿಕ್ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ (ಆನರ್ಸ್) ಪದವಿಯನ್ನು ಸಹ ಪಡೆದಿದ್ದಾರೆ.
2022 ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಟೆನ್ಜಿನ್ ಯಾಂಗ್ಕಿ ಅವರು 545 ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಸಫಲರಾದರು. ಈ ಮೂಲಕ ಟೆನ್ಜಿನ್ ಯಾಂಗ್ಕಿ ಅವರು ಅರುಣಾಚಲ ಪ್ರದೇಶದ ಮೊದಲ ಐಪಿಎಸ್ ಅಧಿಕಾರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರ ಈ ಸಾಧನೆಯು ಕೇವಲ ವೈಯಕ್ತಿಕ ಸಾಧನೆಯಾಗಿರದೆ ಅರುಣಾಚಲ ಪ್ರದೇಶದ ಸಾವಿರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದೆ.































