ನವದೆಹಲಿ: ದೆಹಲಿಯಲ್ಲಿ ನೂತನ ಬಿಜೆಪಿ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದೆ. ಬಿಜೆಪಿ ನಾಯಕ ಅರ್ವಿಂದರ್ ಸಿಂಗ್ ಲವ್ಲಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದು, ಅವರಿಗೆ ಎಲ್‌ಜಿ ವಿಕೆ ಸಕ್ಸೆನಾ ಅವರು ಪ್ರಮಾಣವಚನ ಬೋಧಿಸಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ ಕರ್ತವ್ಯ ನಿರ್ವಹಿಸಿರುವ ಅವರು, ಶಾಶ್ವತ ಸ್ಪೀಕರ್ ಆಯ್ಕೆಯಾಗುವವರೆಗೆ ಹಂಗಾಮಿ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಕುರಿತು ಎಲ್‌ಜಿ ಕಚೇರಿ ಕೂಡ ಪ್ರಕಟಣೆ ಹೊರಡಿಸಿದೆ. ಇಂದಿನಿಂದ 3 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಮೊದಲ ದಿನ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎಲ್‌ಜಿ ವಿಕೆ ಸಕ್ಸೆನಾ ಫೆ. 25ರಂದು ಸದನವನ್ನು ಉದ್ದೇಶಿಸಿ ಮಾತನಾಡಲಿದ್ದು, ಸಿಎಜಿ ವರದಿ ಮಂಡನೆಯಾಗಲಿದೆ. ಇದಾದ ಬಳಿಕ ಮರು ದಿನ ಸದನದಲ್ಲಿ ಎಲ್‌ಜಿ ಭಾಷಣಕ್ಕೆ ವಂದನಾ ನಿರ್ಣಯ ಕೈಗೊಳ್ಳಲಾಗುವುದು. ಫೆ.26ರಂದು ವಂದನಾ ನಿರ್ಣಯದ ಮೇಲೆ ಚರ್ಚೆ ಆರಂಭವಾಗಲಿದೆ ಎಂದು ವರದಿ ತಿಳಿಸಿದೆ.