ಉತ್ತರ ಪ್ರದೇಶ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅನೇಕರ ಕನಸು, ಆದರೆ ಕೆಲವರು ಮಾತ್ರ ನನಸಾಗಿಸಿಕೊಳ್ಳುತ್ತಾರೆ. ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬುದ್ಧಿವಂತಿಕೆ, ಮಾನಸಿಕ ಶಕ್ತಿ ಮತ್ತು ವರ್ಷಗಳ ಪರಿಶ್ರಮ ಬೇಕಾಗುತ್ತದೆ. ಹೀಗೆ ಸೋಲನ್ನು ಮೆಟ್ಟಿ ನಿಂತು ಐಪಿಎಸ್ ಅಧಿಕಾರಿಯಾದ ಆಶ್ನಾ ಚೌಧರಿ ಅವರ ಸ್ಫೂರ್ತಿದಾಯಕ ಯಶೋಗಾಥೆ ಇದು.
ಆಶ್ನಾ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪಿಲ್ಖುವಾ ಎಂಬ ಸಣ್ಣ ಪಟ್ಟಣದವರು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿರುವ ಅವರು, 12 ನೇ ತರಗತಿಯ ಪರೀಕ್ಷೆಗಳಲ್ಲಿ 96.5% ಅಂಕಗಳನ್ನು ಗಳಿಸಿದರು. ನಂತರ ಅವರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಲು ನಿರ್ಧರಿಸುವ ಮೊದಲು ಅವರು ಬಡ ಮಕ್ಕಳಿಗೆ ಸಹಾಯ ಮಾಡುವ ಎನ್‌ಜಿಒದೊಂದಿಗೆ ಕೆಲಸ ಮಾಡುತ್ತಿದ್ದರು.
ಕುಟುಂಬದ ಪ್ರೇರಣೆಯಿಂದ 2019 ರಲ್ಲಿ ಆಶ್ನಾ ಅವರ ಯುಪಿಎಸ್‌ಸಿ ಪಯಣ ಪ್ರಾರಂಭವಾಯಿತು. ಆದಾಗ್ಯೂ, ಅವರು ಹಿನ್ನಡೆ ಅನುಭವಿಸಿದರು. ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾದರು. ಆದರೆ ಅವರು ಕುಗ್ಗದೆ ಮತ್ತಷ್ಟು ಅಭ್ಯಾಸ ಮಾಡಿದರು. 2022 ರಲ್ಲಿ ಮೂರನೇ ಬಾರಿ ಪರೀಕ್ಷೆ ಬರೆದ ಅವರು ಅಖಿಲ ಭಾರತ 116 ನೇ ರ‍್ಯಾಂಕ್ ಗಳಿಸಿದರು.
ಐಎಎಸ್ ಗೆ ಅರ್ಹತೆ ಪಡೆದರೂ, ಆಶ್ನಾ ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿ ಐಪಿಎಸ್ ಅನ್ನು ತಮ್ಮ ಆದ್ಯತೆಯಾಗಿ ಆಯ್ಕೆ ಮಾಡಿಕೊಂಡರು. ಆಶ್ನಾ ಅವರು ಯಾವುದೇ ತರಬೇತಿ ಇಲ್ಲದೆ, ಸ್ವಯಂ ಅಧ್ಯಯನದ ಮೂಲಕ ಯಶಸ್ಸನ್ನು ಸಾಧಿಸಿದರು.