ಚಿತ್ರದುರ್ಗ : ಒಕ್ಕಲಿಗ ಜನಾಂಗಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿದರೆ ಮುಂದಿನ ಪೀಳಿಗೆಗೆ ದಾರಿ ಸುಲಲಿತವಾಗಿರುತ್ತದೆ. ನಮ್ಮ ಸಮುದಾಯ ಯಾರನ್ನು ದ್ವೇಷಿಸಲ್ಲ. ಎಲ್ಲರೊಂದಿಗೆ ಪ್ರೀತಿಯಿಂದ ಇರುತ್ತದೆ. ಬೇರೆ ಸಮುದಾಯದವರನ್ನು ತುಳಿದು ಮೇಲೆ ಬರುವ ಚಿಂತನೆಯಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದಿಂದ ಬಿ.ಡಿ.ರಸ್ತೆಯಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನದ ಡೈನಿಂಗ್ ಹಾಲ್ ಉದ್ಘಾಟನಾ ಕಾರ್ಯಕ್ರಮ ಹಾಗೂ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಮಾತನಾಡಿದರು.
ಒಕ್ಕಲಿಗ ಸಮುದಾಯ ಒಟ್ಟಾಗಿರಿ. ಎಲ್ಲರನ್ನು ಸಹೋದರರಂತೆ ಕಾಣಿ. ಪ್ರತಿ ತಾಲ್ಲುಕಿನಲ್ಲಿಯೂ ಹಾಸ್ಟೆಲ್ ಮತ್ತು ಸಮುದಾಯ ಭವನಗಳನ್ನು ಕಟ್ಟಿಸಿ. ಶಿಕ್ಷಣದಿಂದ ಮಾತ್ರ ಒಕ್ಕಲಿಗ ಜನಾಂಗ ಮುಂದುವರೆಯಲು ಸಾಧ್ಯ. ಆಸ್ತಿ, ಅಂತಸ್ತಿಗಿಂತ ವಿದ್ಯೆಗೆ ಹೆಚ್ಚಿನ ಮಹತ್ವವಿದೆ. 40 ವರ್ಷಗಳ ಹಿಂದೆ ನಮ್ಮ ಸಮುದಾಯವನ್ನು ಕೇಳುವವರಿರಲಿಲ್ಲ.ಈಗ ಪರಿಸ್ಥಿತಿ ಬದಲಾಗಿದೆ. ಒಕ್ಕಲಿಗರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಕೆಲವರು ಅಧಿಕಾರ ಸಿಕ್ಕಾಗ ಮೈಮೇಲೆ ಹುಚ್ಚು ಬಂದಂತೆ ಆಡುತ್ತಾರೆ. ಕಳೆದುಕೊಂಡಾಗ ಮೂಲೆ ಸೇರುತ್ತಾರೆ. ಅಧಿಕಾರದಲ್ಲಿದ್ದಾಗ ಸಮುದಾಯಕ್ಕೆ ಏನು ಮಾಡಿದ್ದೇನೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಬೆಂಗಳೂರು ಕಟ್ಟಿದ ಕೆಂಪೆಗೌಡರ ಪ್ರತಿಮೆ ವಿಧಾನಸೌಧದ ಮುಂದೆ ಇರಲಿಲ್ಲ. ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ ಪ್ರತಿಮೆ ನಿರ್ಮಾಣವಾಯಿತು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಾಸ್ಟೆಲ್ಗಳನ್ನು ಕಟ್ಟಿ. ಸಮಾಜದ ಅಭಿವೃದ್ದಿಗಾಗಿ ಪಕ್ಷ ಬೇಧ ಮರೆತು ಕೆಲಸ ಮಾಡಿದಾಗ ಶಾಶ್ವತವಾಗಿ ಹೆಸರು ಉಳಿಯುತ್ತದೆ. ಒಕ್ಕಲಿಗರ ನಿಗಮ ಮಂಡಳಿ ಸ್ಥಾಪಿಸಿ ನೂರು ಕೋಟಿ ರೂ.ಗಳನ್ನು ಕೊಟ್ಟಿದ್ದೇನೆಂದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ ಹಿಂದಿನ ಕಾಲದಲ್ಲಿ ವಿದ್ಯೆದಾನ ಮಾಡುತ್ತಿದ್ದ ಗುರುಕುಲ ಮತ್ತು ಆಶ್ರಮಗಳು ಈಗ ಮಠಗಳಾಗಿ ಶಿಕ್ಷಣಕ್ಕೆ ಒತ್ತು ಕೊಡುತ್ತಿವೆ. ಜಿಲ್ಲಾ ಒಕ್ಕಲಿಗರ ಸಂಘ ಅದ್ಬುತವಾದ ಡೈನಿಂಗ್ ಹಾಲ್ ಕಟ್ಟಿದೆ. ಇಲ್ಲಿ ನಿತ್ಯ ಕಲ್ಯಾಣ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಿ ಬೆನ್ನುತಟ್ಟಿದಾಗ ಇನ್ನು ಹೆಚ್ಚಿನ ಸಾಧನೆ ಮಾಡಲು ನೆರವಾಗಲಿದೆ. ಶ್ರೇಷ್ಠ ಕೆಲಸ ನಿಮ್ಮ ಸಂಘದಿಂದ ನಡೆಯುತ್ತಿದೆ ಎಂದು ಪ್ರಶಂಶಿಸಿದರು.
ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿ ಶಿವಮೊಗ್ಗದ ಪ್ರತಿ ತಾಲ್ಲೂಕಿನಲ್ಲಿಯೂ ಒಕ್ಕಲಿಗರ ಸಮುದಾಯ ಭವನವಿದೆ. 1 ಲಕ್ಷ 72 ಸಾವಿರ ಮಕ್ಕಳು ಓದುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕೊಡುಗೆಯಿದೆ. ಶಿಕ್ಷಣದ ಕಡೆ ಮಕ್ಕಳು ಹೆಚ್ಚಿನ ಗಮನಹರಿಸಬೇಕು. ದಾನಕ್ಕಿರುವ ಶ್ರೇಷ್ಠತೆ ಏನು ಎನ್ನುವುದು ಮುಖ್ಯ. ಸಮಾಜದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ನಂಬಿಕೆ, ಶ್ರದ್ದೆಯಿರಬೇಕು. ಜೊತೆಗೆ ಭಗವಂತನಲ್ಲಿ ಭಕ್ತಿಯೂ ಇಡಬೇಕೆಂದರು.
ತಿಪಟೂರಿನಲ್ಲಿ ಅದ್ಬುತವಾದ ಕಲ್ಯಾಣ ಮಂಟಪ ಕಟ್ಟಲಾಗಿದೆ. ಅದೇ ರೀತಿ ಎಲ್ಲಾ ತಾಲ್ಲೂಕಿನಲ್ಲಿಯೂ ಕಲ್ಯಾಣ ಮಂಟಪ, ಮಕ್ಕಳ ಶಿಕ್ಷಣಕ್ಕೆ ಹಾಸ್ಟೆಲ್ಗಳ ನಿರ್ಮಾಣವಾಗಬೇಕು. ಒಕ್ಕಲಿಗರ ಸಂಘ ಮನಸ್ಸು ಮಾಡಿದರೆ ಏನು ಸಾಧನೆ ಬೇಕಾದರೂ ಮಾಡಬಹುದು ಎಂದು ಹೇಳಿದರು.
ಒಕ್ಕಲಿಗರ ಸಂಘ ಬೆಂಗಳೂರಿನ ಡಾ.ಜೆ.ರಾಜು ಮಾತನಾಡಿ ಬಹುದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮಾಜವನ್ನು ವಿಭಜಿಸಿ ಜನಸಂಖ್ಯೆಯನ್ನು ಕಡಿಮೆಗೊಳಿಸುವ ಹುನ್ನಾರ ನಡೆಯುತ್ತಿದೆ. ಸಮುದಾಯದವರು ಸಂಘಟಿತರಾಗಿ ಸಕ್ರಿಯವಾಗಿರಬೇಕೆಂದು ಕರೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಆರ್.ಮಂಜುನಾಥ್ ಮಾತನಾಡುತ್ತ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮಿ ರಾಜ್ಯ ಸುತ್ತಾಡಿ ಒಕ್ಕಲಿಗ ಜನಾಂಗವನ್ನು ಒಂದುಗೂಡಿಸಿದರು. ಈಗ ಸಮುದಾಯದಲ್ಲಿ ಸಂಘಟನೆಯ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಮಾತನಾಡಿ ಒಕ್ಕಲಿಗ ಸಮುದಾಯದವರು ಸಂಕುಚಿತ ಮನೋಭಾವ ಬಿಟ್ಟು ಮೊದಲು ಸಂಘಟಿತರಾಗಿ. ಪ್ರತಿ ತಾಲ್ಲೂಕುಗಳಲ್ಲಿ ಹಾಸ್ಟೆಲ್ಗಳನ್ನು ನಿರ್ಮಿಸಿ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ. ಅದೇ ರೀತಿ ಸಮುದಾಯ ಭವನ ಕೂಡ ನಿರ್ಮಾಣವಾಗಬೇಕು. ಜನಾಂಗದ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಿ ಸದಾ ನನ್ನ ಬೆಂಬಲವಿರುತ್ತದೆಂದು ಭರವಸೆ ನೀಡಿದರು.
ಜೆಡಿಎಸ್. ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡುತ್ತ ರಾಜ್ಯದಲ್ಲಿ ಒಕ್ಕಲಿಗ ಸಮಾಜ ಬಲಿಷ್ಟವಾಗಿದೆ. ಪಟ್ಟಭದ್ರರು ನಮ್ಮ ಜನಾಂಗದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಒಳ ಪಂಗಡಗಳನ್ನು ಮರೆತು ಎಲ್ಲರೂ ಒಂದಾಗಿ ಎಂದು ಮನವಿ ಮಾಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಹೆಚ್.ಆರ್.ತಿಮ್ಮಯ್ಯ ಮಾತನಾಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಹಿರಿಯೂರು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ರಾಮಚಂದ್ರಪ್ಪ, ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.































