ದಿಸ್ಪುರ್: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಕನಿಷ್ಠ ಒಂಬತ್ತು ಗಣಿ ಕಾರ್ಮಿಕರಲ್ಲಿ ನಾಲ್ವರ ಶವಗಳನ್ನು ಹೊರತೆಗೆಯಲಾಗಿದೆ. ಕನಿಷ್ಠ ಐದು ಜನರು ಗಣಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಜೀವಂತವಾಗಿ ರಕ್ಷಿಸುವ ಭರವಸೆ ಇಲ್ಲ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸೇನೆ ಮತ್ತು ರಾಷ್ಟ್ರೀಯ ವಿಪತ್ತು ಪಡೆ ಶನಿವಾರ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಒಬ್ಬರ ಶವವನ್ನು ಹೊರತೆಗೆದಿದೆ. ಮೃತನನ್ನು ಉಮ್ರಾಂಗ್ಸೊ ನಿವಾಸಿ 27 ವರ್ಷದ ಲಿಜೆನ್ ಮಗರ್ ಎಂದು ಗುರುತಿಸಲಾಗಿದೆ. ನಂತರ ಹೊರತೆಗೆಯಲಾದ ಎರಡನೇ ಶವವನ್ನು ಇನ್ನೂ ಗುರುತಿಸಲಾಗಿಲ್ಲ. ಇದಕ್ಕೂ ಮೊದಲು, ಗಂಗಾ ಬಹದ್ದೂರ್ ಶ್ರೆಷ್ಟೊ ಅವರ ಶವವನ್ನು ಮಂಗಳವಾರ ಬೆಳಗ್ಗೆ ಹೊರತೆಗೆಯಲಾಗಿತ್ತು. ಅದರ ನಂತರ, ನಿರಂತರ ನೀರು ತೆಗೆಯುವ ಪ್ರಯತ್ನಗಳು ನಡೆದಿತ್ತು.
ಘಟನೆ ನಡೆದ ಸ್ಥಳ ಅಸ್ಸಾಂ ಮತ್ತು ಮೇಘಾಲಯದ ಗಡಿಗೆ ಹತ್ತಿರದಲ್ಲಿದೆ. 2018 ರಲ್ಲಿ ಮೇಘಾಲಯದ ಪೂರ್ವ ಜೈನ್ತಿಯಾ ಬೆಟ್ಟಗಳಲ್ಲಿ ಪ್ರವಾಹಕ್ಕೆ ಸಿಲುಕಿ 15 ಕಾರ್ಮಿಕರು ಸಾವನ್ನಪ್ಪಿದಾಗ ಈ ಪ್ರದೇಶದ ಗಣಿಗಾರಿಕೆಯಲ್ಲಿ ಅತ್ಯಂತ ಭೀಕರ ದುರಂತಗಳು ಸಂಭವಿಸಿದ್ದವು.
ದಿಮಾ ಹಸಾವೊ ವ್ಯಾಪಕವಾದ ಕಲ್ಲಿದ್ದಲು, ಸುಣ್ಣದ ಕಲ್ಲು ಮತ್ತು ಗ್ರಾನೈಟ್ ಗಣಿಗಾರಿಕೆಗೆ ಹೆಸರುವಾಸಿಯಾಗಿದೆ.
ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿರುವ 300 ಅಡಿ ಆಳದ ರ‍್ಯಾಟ್ ಹೋಲ್ ಮೈನಿಂಗ್ ಒಂದರಲ್ಲಿ ಜ.5 ರಂದು ನೀರು ತುಂಬಿದ್ದು, ಕಾರ್ಮಿಕರು ಸಿಲುಕಿದ್ದರು.
ಕ್ವಾರಿಯಲ್ಲಿ ಸುಮಾರು 100 ಅಡಿ ನೀರು ತುಂಬಿದೆ ಎಂದು ಮೂಲಗಳು ತಿಳಿಸಿದ್ದವು. ಬಳಿಕ ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು.