ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜುಲೈ 14ರಂದು ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಎಂದು ಹೇಳಲಾಗಿದೆ.
ಶುಭಾಂಶು ಶುಕ್ಲಾ ಅವರು ‘ಆಕ್ಸಿಯಂ-4’ ಕಾರ್ಯಾಚರಣೆಯ ಭಾಗವಾಗಿ 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಲಿದ್ದಾರೆ. ‘ಆಕ್ಸಿಯಂ-4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ನ ‘ಫಾಲ್ಕನ್-9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಜೂನ್ 25 ರಂದು ಯಶಸ್ವಿಯಾಗಿ ಉಡಾವಣೆಯಾಗಿತ್ತು.
ಶುಭಾಂಶು ಮತ್ತು ಅವರ ಸಹ ಗಗನಯಾತ್ರಿಗಳಾದ ಕಮಾಂಡರ್ ಪೆಗ್ಗಿ ವಿಟ್ಸನ್(ಯುಎಸ್‌ಎ), ಸ್ಲಾವೋಸ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಪು (ಹಂಗೇರಿ) ಅವರು ಇದೇ ಜುಲೈ 10ರ ನಂತರ ಯಾವುದೇ ಸಮಯದಲ್ಲಿ ಭೂಮಿಗೆ ಮರಳಬಹುದು. ಜುಲೈ 14 ರ ಮೊದಲು ಅವರ ಮರಳುವಿಕೆ ಸಾಧ್ಯವಿಲ್ಲ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಆಕ್ಸಿಯಂ-4 ಸಿಬ್ಬಂದಿ ಸ್ಪೇಸ್ಎಕ್ಸ್ನ ಡ್ರ‍್ಯಾಗನ್ ಕ್ಯಾಪ್ಸುಲ್ ‘ಗ್ರೇಸ್’ನಲ್ಲಿ ಭೂಮಿಗೆ ಮರಳಲಿದ್ದಾರೆ. ಇದು ಅಟ್ಲಾಂಟಿಕ್ ಸಾಗರ ಅಥವಾ ಫ್ಲೋರಿಡಾ ಕರಾವಳಿಯ ಬಳಿಯ ಮೆಕ್ಸಿಕೋ ಕೊಲ್ಲಿಯಲ್ಲಿ ಮೃದುವಾದ ಸ್ಪ್ಲಾಶ್‌ಡೌನ್ ಮಾಡುತ್ತದೆ. ಆದರೆ ಬಲವಾದ ಗಾಳಿ, ಮಳೆ ಅಥವಾ ಬಿರುಗಾಳಿಗಳಂತಹ ಪ್ರದೇಶದಲ್ಲಿ ಹವಾಮಾನ ಸಮಸ್ಯೆಗಳಿದ್ದರೆ, ಸ್ಪ್ಲಾಶ್‌ಡೌನ್ ಸುರಕ್ಷಿತವಾಗಿರುವುದಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಜುಲೈ 14 ರವರೆಗೆ ವಾಪಸಾತಿ ವಿಳಂಬವಾಗಬಹುದು ಎಂದು ಇಎಸ್‌ಎ ಮತ್ತು ನಾಸಾ ಮಾಹಿತಿ ನೀಡಿದೆ.
ರಾಕೆಟ್‌ನಲ್ಲಿ ದ್ರವ ಆಮ್ಲಜನಕ ಸೋರಿಕೆ, ಡ್ರ‍್ಯಾಗನ್ ಕ್ಯಾಪ್ಸುಲ್‌ನ ವಿದ್ಯುತ್ ಸರಬರಾಜು ಸಮಸ್ಯೆಗಳು ಮತ್ತು ಕೆಟ್ಟ ಹವಾಮಾನದಂತಹ ತಾಂತ್ರಿಕ ದೋಷಗಳಿಂದ ‘ಆಕ್ಸಿಯಂ-4’ ಮಿಷನ್ ಉಡಾವಣೆ ಹಲವಾರು ಬಾರಿ ವಿಳಂಬವಾಗಿತ್ತು.