ತಮಿಳುನಾಡು : ಹಿಂದಿ ಹೇರಿಕೆ ಅಂತೀರಿ, ತಮಿಳು ನಾಯಕರು ಯಾರು ಕೂಡ ತಮಿಳಿನಲ್ಲಿ ಸಹಿ ಮಾಡಿರುವುದನ್ನು ನಾನು ಕಂಡಿಲ್ಲ, ಕನಿಷ್ಠ ಪಕ್ಷ ನಿಮ್ಮ ಸಹಿಯನ್ನಾದ್ರೂ ತಮಿಳಿನಲ್ಲಿ ಮಾಡಿ ಎಂದು ತಮಿಳುನಾಡಿನಲ್ಲಿ ತಮಿಳು ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ , ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅನ್ನು ತರಾಟೆಗೆ ತೆಗೆದುಕೊಂಡರು. ತಮಿಳುನಾಡು ನಾಯಕರಿಂದ ಹಲವಾರು ಪತ್ರಗಳು ಬಂದರೂ ಅವರಲ್ಲಿ ಯಾರ ಸಹಿಯೂ ತಮಿಳಿನಲ್ಲಿಲ್ಲ. ಅವರಿಗೆ ನಿಜವಾಗಿಯೂ ತಮ್ಮ ಭಾಷೆಯ ಬಗ್ಗೆ ಹೆಮ್ಮೆಯಿದ್ದರೆ, ಕನಿಷ್ಠ ಪಕ್ಷ ತಮಿಳಿನಲ್ಲಿ ಸಹಿ ಹಾಕಬೇಕು ಎಂದು ಅವರು ಹೇಳಿದರು.
ತಮಿಳು ಭಾಷೆ ಮತ್ತು ತಮಿಳು ಪರಂಪರೆ ಪ್ರಪಂಚದ ಮೂಲೆ ಮೂಲೆಗೂ ತಲುಪುವಂತೆ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಕೆಲವೊಮ್ಮೆ, ತಮಿಳುನಾಡಿನ ಕೆಲವು ನಾಯಕರಿಂದ ಪತ್ರಗಳು ಬಂದಾಗ ನನಗೆ ಆಶ್ಚರ್ಯವಾಗುತ್ತದೆ. ಅವುಗಳಲ್ಲಿ ಯಾವುದೂ ತಮಿಳಿನಲ್ಲಿ ಸಹಿ ಮಾಡಿಲ್ಲ. ನಮಗೆ ತಮಿಳಿನ ಬಗ್ಗೆ ಹೆಮ್ಮೆಯಿದ್ದರೆ, ಪ್ರತಿಯೊಬ್ಬರೂ ಕನಿಷ್ಠ ತಮಿಳಿನಲ್ಲಿ ತಮ್ಮ ಹೆಸರಿಗೆ ಸಹಿ ಹಾಕಬೇಕೆಂದು ನಾನು ವಿನಂತಿಸುತ್ತೇನೆ ಎಂದರು.
ಕೇಂದ್ರದ ಬಿಜೆಪಿ ಸರ್ಕಾರ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿರುವುದರಿಂದ, ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಡುವೆ ತೀವ್ರ ವಾಕ್ಸಸಮರ ನಡೆಯುತ್ತಿದೆ. ಹೊಸ ಶಿಕ್ಷಣ ನೀತಿ (ಎನ್ಇಪಿ)ಯ ತ್ರಿಭಾಷಾ ಸೂತ್ರವು ಇತ್ತೀಚಿನ ಪ್ರಮುಖ ಅಂಶವಾಗಿದೆ. ಈ ಕ್ರಮಗಳು ತಮಿಳು ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ತರುತ್ತವೆ ಎಂದು ರಾಜ್ಯ ವಾದಿಸಿದೆ.