ತುಮಕೂರು : ಎಟಿಎಂನಲ್ಲಿರುವ ಹಣ ಕದಿಯಲು ಯತ್ನಿಸಿದ ಖತರ್ನಾಕ್ ಕಳ್ಳರ ತಂಡವೊಂದು ಯಂತ್ರವನ್ನೇ ಕಳವು ಮಾಡಲು ಬಂದಾಗ ಅದರ ಭಾರ ತಡೆಯಲಾಗದೆ, ಮಷಿನ್‌ನ್ನು ರಸ್ತೆ ಮಧ್ಯೆಯೇ ಬಿಟ್ಟು ಓಡಿ ಹೋಗಿರುವ ವಿಚಿತ್ರ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಗ್ರಾಮದಲ್ಲಿ ನಡೆದಿದೆ.
ಗುರುವಾರ ತಡರಾತ್ರಿ ಇಂಡಿಯನ್–1 ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಮೊದಲಿಗೆ ಯಂತ್ರದೊಳಗಿನ ನಗದು ಕದಿಯಲು ಪ್ರಯತ್ನಿಸಿದ್ದಾರೆ. ಹಣ ತೆಗೆಯಲು ಸಾಧ್ಯವಾಗದ ನಂತರ ಎಟಿಎಂ ಮಷಿನ್‌ನ್ನೇ ಎತ್ತಿಕೊಂಡು ಹೋಗಲು ಯತ್ನಿಸಿದರೂ, ಯಂತ್ರದ ತೂಕ ಹೆಚ್ಚಿರುವುದರಿಂದ ಅದನ್ನು ಸಾಗಿಸಲು ಸಾಧ್ಯವಾಗದೇ ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಘಟನೆಯ ಸಮಯದಲ್ಲಿ ಎಟಿಎಂ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿಸಿಟೀವಿ ಕ್ಯಾಮೆರಾಗಳನ್ನು ಕಳ್ಳರು ಕಿತ್ತುಹಾಕಿದ್ದು, ಪೊಲೀಸರು ತನಿಖೆ ನಡೆಸುವಲ್ಲಿ ನಿರ್ದಿಷ್ಟ ಸುಳಿವುಗಳು ಸಿಗದೇ ಕಳವಳಗೊಂಡಿದ್ಧಾರೆ. ಈ ನಡುವೆ, ಎಟಿಎಂ ಕೇಂದ್ರಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿಲ್ಲವೆಂಬ ಕಾರಣಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಬ್ಯಾಂಕ್‌ವು ಆರ್‌ಬಿಐನ ಭದ್ರತಾ ಮಾನದಂಡಗಳನ್ನು ಪಾಲಿಸದಿರುವುದು ಬೆಳಕಿಗೆ ಬಂದಿದೆ. ಸುರಕ್ಷತಾ ನಿಯಮ ಉಲ್ಲಂಘನೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಟಿಎಂ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಗುರುತಿಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಮುಂದುವರಿಸಿದ್ದಾರೆ.

































