ಬೆಂಗಳೂರು ನಗರದಲ್ಲಿ ಬಸ್ ಮತ್ತು ಮೆಟ್ರೋ ದರ ಏರಿಕೆಯ ಬೆನ್ನಲ್ಲೇ ಇದೀಗ ಆಟೋ ಪಯಾಣ ಕೂಡ ದುಬಾರಿಯಾಗುವ ಸಾಧ್ಯತೆ ಉದ್ಭವಿಸಿದೆ. ಮಾರ್ಚ್ ತಿಂಗಳಲ್ಲೇ ಆಟೋ ಮೀಟರ್ ದರ ಹೆಚ್ಚಳ ಬಹುತೇಕ ಖಚಿತವಾಗಿದೆ.
ಬಹಿರಂಗ ಸಭೆ:
ಆಟೋ ಮೀಟರ್ ದರ ಪರಿಷ್ಕರಣೆ ಕುರಿತು ಇಂದು (ಮಾರ್ಚ್ 12) ಬೆಳಗ್ಗೆ 11 ಗಂಟೆಗೆ ಇನ್ಫಂಟ್ರಿ ರಸ್ತೆಯ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ.
ಆಟೋ ಸಂಘಟನೆಗಳು ಕನಿಷ್ಠ ಮೀಟರ್ ದರವನ್ನು ಈಗಿನ ₹30 ರಿಂದ ₹40ಕ್ಕೆ ಹೆಚ್ಚಿಸಲು ಒತ್ತಾಯಿಸುತ್ತಿವೆ. ಜೊತೆಗೆ ಒಂದು ಕಿಮೀಗೆ ₹5 ಹಾಗೂ ಎರಡು ಕಿಮೀಗೆ ₹10 ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ 2021ರಲ್ಲಿ ಮೀಟರ್ ದರ ಪರಿಷ್ಕರಣೆ ಮಾಡಲಾಗಿತ್ತು. ಈ ವೇಳೆ ಸಿಎನ್ಜಿ (CNG) ದರ ಕೆಜಿಗೆ ₹61 ಇದ್ದಾಗ ದರ ನಿಗದಿ ಮಾಡಲಾಗಿತ್ತು. ಆದರೆ ಇದೀಗ ಸಿಎನ್ಜಿ ದರ ₹88ಕ್ಕೆ ಏರಿಕೆಯಾಗಿದೆ. ಈ ಕಾರಣದಿಂದಾಗಿ ಆಟೋ ಚಾಲಕರು ದರ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದಾರೆ.