ಪೊಲೀಸರಿಂದ ಸಾರ್ವಜನಿಕರ ನೆಮ್ಮದಿಯ ಜೀವನ: ಬಿ.ಟಿ.ಕುಮಾರಸ್ವಾಮಿ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಾರ್ವಜನಿಕರು ಶಾಂತಿಯುತ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಆವರಣದಲ್ಲಿ ಮಂಗಳವಾರ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

ದೇಶದ ಹೊರಗಡೆ ದೇಶ ಕಾಯುವ ಯೋಧ, ದೇಶದ ಒಳಗಡೆ ನಮ್ಮ ಕಾಯುವ ಪೊಲೀಸರು ಬಹಳ ಮುಖ್ಯ ಪಾತ್ರವಹಿಸುತ್ತಾರೆ. ಪ್ರತಿಯೊಬ್ಬ ನಾಗರಿಕರ ನೆಮ್ಮದಿಯ ಜೀವನಕ್ಕೆ ತಮ್ಮ ಕುಟುಂಬ ಹಾಗೂ ಜೀವನವನ್ನೂ ಲೆಕ್ಕಿಸದೇ ನಮ್ಮ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.

ನಾಗರಿಕರು ಯಾವುದೇ ರೀತಿಯಾಗಿ ಕಾನೂನು ಉಲ್ಲಂಘನೆ ಮಾಡದಂತೆ, ಕಾನೂನು ಸಂಘರ್ಷಕ್ಕೆ ಎಡೆಮಾಡಿಕೊಡದೇ, ಸಾರ್ವಜನಿಕರು ಈ ದೇಶದ, ನೆಲದ ಕಾನೂನುಗಳನ್ನು ಗೌರವಿಸುವ ಮೂಲಕ ಕಾನೂನು ರಕ್ಷಣೆ ಮಾಡುವ ಪ್ರಜ್ಞೆ ಮತ್ತು ಪರಿಕಲ್ಪನೆ ಮೂಡಿದಾಗ ಉತ್ತಮ ಸಮಾಜ ಹಾಗೂ ಸುಸಂಸ್ಕøತ ನಾಡು ನಿರ್ಮಾಣವಾಗಲಿದೆ ಎಂದರು.

ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ ಎಲ್ಲ ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಕಾರಣೀಭೂತರಾಗಿದ್ದಾರೆ ಹಾಗಾಗಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪೊಲೀಸರೊಂದಿಗೆ ನಾಗರಿಕರು ಸಹ ಕೈಜೋಡಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, 1959ರ ಅಕ್ಟೋಬರ್ 21ರಂದು ಸಿಆರ್‍ಪಿಎಫ್ ಡಿಎಸ್‍ಪಿ ಕರಣ್ ಸಿಂಗ್ ಅವರ ಮುಖಂಡತ್ವದಲ್ಲಿ ಒಂದು ಸಿಆರ್‍ಪಿಎಫ್ ತುಕಡಿ ಲಡಾಕ್ ಪ್ರದೇಶದಲ್ಲಿರುವ ಹಾಟ್ ಸ್ಪ್ರಿಂಗ್ಸ್ ಹತ್ತಿರ ಗಡಿ ಭಾಗದಲ್ಲಿ ಗಸ್ತು ಮಾಡುತ್ತಿದ್ದಾಗ ಹಲವಾರು ಚೀನಾ ದೇಶದ ಸೈನಿಕರು, ಹಠಾತ್ ದಾಳಿ ಮಾಡಿದ್ದು, ಅವರು ನಮ್ಮ ಸಿಆರ್‍ಪಿಎಫ್ ತುಕಡಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದು ಮತ್ತು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ನಮ್ಮ ಸಿಆರ್‍ಪಿಎಫ್ ಪೊಲೀಸರು ತಮ್ಮ ಹತ್ತಿರ ಇದ್ದಂತಹ ಕೇವಲ ಕೆಲವೇ ರೈಫಲ್‍ಗಳಿಂದ ತಮ್ಮ ಉಸಿರು ಇರುವವರೆಗೆ ಧೈರ್ಯ ಮತ್ತು ಶೌರ್ಯದಿಂದ ಹೋರಾಡುತ್ತಾ 10 ಜನ ಸಿಆರ್‍ಪಿಎಫ್ ಯೋಧರು ವೀರ  ಮರಣ ಹೊಂದಿರುತ್ತಾರೆ ಹಾಗೂ 09 ಜನ ಸಿಆರ್‍ಪಿಎಫ್ ಯೋಧರನ್ನು ಚೀನಾ ಸೈನಿಕರು ದಸ್ತಗಿರಿ ಸಹ ಮಾಡಿರುತ್ತಾರೆ. ವೀರ ಮರಣ ಹೊಂದಿದ ಸಿಆರ್‍ಪಿಎಫ್ ಯೋಧರಿಗೆ ಇಡೀ ದೇಶವು ಶ್ರದ್ಧಾಂಜಲಿಯನ್ನು ಅರ್ಪಿಸಿ ಅವರ ಧೈರ್ಯ, ಶೌರ್ಯವನ್ನು ಕೊಂಡಾಡಿತು. ದೇಶಕ್ಕಾಗಿ ಹೋರಾಡುತ್ತಾ ವೀರ ಸ್ವರ್ಗ ಪಡೆದ ಈ ವೀರರ ಸ್ಮರಣೆಗಾಗಿ ವೀರ ಯೋಧರ ಸ್ಮಾರಕವನ್ನು ಲಡಾಕ್‍ನ ಅಬಾಸಿ ಚಿನ್ ಭಾಗದಲ್ಲಿ 18,000 ಅಡಿ ಎತ್ತರದ ಮೇಲೆ ನಿರ್ಮಿಸಲಾಗಿದ್ದು, ಇದರ ಪ್ರತೀಕವಾಗಿ ರಾಷ್ಟ್ರಾಧ್ಯಂತ ಪೊಲೀಸರು ಪ್ರತಿ ವರ್ಷ ಈ ದಿನದಂದು ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಪೊಲೀಸ್ ಹುತಾತ್ಮರ ಸ್ಮರಣೆಗಾಗಿ ಪ್ರತಿ ವರ್ಷವೂ ದೇಶಾದ್ಯಂತ ನಮ್ಮ ಇಲಾಖೆಯಿಂದ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮರ ದಿನಾಚರಣೆ  ಎಂದು ಆಚರಿಸಲಾಗುವುದು. ಈ ವರ್ಷದಲ್ಲಿ ಕರ್ತವ್ಯದಲ್ಲಿದ್ದಾಗ ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ದರ್ಜೆಯ ಪೊಲೀಸ್ ಅಧಿಕಾರಿಗಳ ಹೆಸರನ್ನು ರಾಷ್ಟ್ರಾದ್ಯಂತ ಎಲ್ಲ ಘಟಕಗಳಲ್ಲಿ ಓದಿ ಗೌರವ ಸಲ್ಲಿಸಲಾಗುತ್ತದೆ. ಈ ವರ್ಷ 2024ರ ಸೆಪ್ಟೆಂಬರ್ 01 ರಿಂದ 2025ರ ಆಗಸ್ಟ್ 31 ರವರೆಗೆ ಭಾರತ ದೇಶದಲ್ಲಿ ಒಟ್ಟು 191 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಕರ್ತವ್ಯದಲ್ಲಿರುವಾಗ ಹುತಾತ್ಮರಾಗಿದ್ದು, ಅದರಲ್ಲಿ ಕರ್ನಾಟಕದವರು ಒಟ್ಟು 08 ಜನ ಹುತಾತ್ಮರಾಗಿರುವುದರಿಂದ ಅವರಿಗೆ ಈ ಸಮಯದಲ್ಲಿ ಶ್ರದ್ದಾಂಜಲಿ ಅರ್ಪಿಸುತ್ತಿದ್ದೇವೆ ಎಂದು ತಿಳಿಸಿದ ಅವರು, ದೇಶದಾದ್ಯಂತ ಹುತಾತ್ಮರಾದ 191 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಹೆಸರುಗಳನ್ನು ಈ ಸಂದರ್ಭದಲ್ಲಿ ವಾಚಿಸಿದರು.

ಮುಖ್ಯ ಅತಿಥಿಗಳು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹಿರಿಯ ಪತ್ರಕರ್ತರು, ವಕೀಲರು, ವೈದ್ಯರು ಸೇರಿದಂತೆ ಸಾರ್ವಜನಿಕರು ಹುತಾತ್ಮರಿಗೆ ಹೂಗುಚ್ಛ ಇರಿಸಿ ಗೌರವ ಸಮರ್ಪಿಸಿದರು. ಹುತಾತ್ಮರ ಗೌರವಾರ್ಥ ಮೂರು ಸುತ್ತು ಗಾಳಿಯಲ್ಲಿ ಫೈರಿಂಗ್ ಮಾಡುವುದರ ಜೊತೆಗೆ ಪೊಲೀಸ್ ವಾದ್ಯ ವೃಂದದಿಂದ ರಾಷ್ಟ್ರಗೀತೆ ನುಡಿಸಿ, ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಆರ್.ಶಿವಕುಮಾರ್, ಪೊಲೀಸ್ ಉಪಾಧೀಕ್ಷಕರಾದ ಜೆ.ಶ್ರೀನಿವಾಸ್, ಪಿ.ಕೆ.ದಿನಕರ್, ಉಮೇಶ್ ಈಶ್ವರ್ ನಾಯಕ್, ಶಿವಕುಮಾರ್, ಎಂ.ಜಿ. ಸತ್ಯನಾರಾಯಣರಾವ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon