ಚಿತ್ರದುರ್ಗ: ಇಲ್ಲಿನ ಸ್ವಾಮಿ ವಿವೇಕಾನಂದ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರೆ ಮುಖ್ಯ ಶಿಕ್ಷಕಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷೆ ಬಿ.ವಿಮಲಾಕ್ಷಿ ಅವರು ದಕ್ಷಿಣ ಭಾರತದ ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಸಾವಿತ್ರಿಬಾಯಿಪುಲೆ ಜನ್ಮ ದಿನಾಚರಣೆಯಂದು ಗುರುಚೈತನ್ಯ ಉಪಾಧ್ಯಾಯ ಸಂಘವು “ದಕ್ಷಿಣ ಭಾರತದ ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿ ಪ್ರದಾನ ಮಾಡಿದೆ.
ಮುಖ್ಯ ಶಿಕ್ಷಕಿ ಬಿ.ವಿಮಲಾಕ್ಷಿ ಅವರು ತಮ್ಮ 24 ವರ್ಷಗಳ ಸುದೀರ್ಘ ಕಾಲದ ಶಿಕ್ಷಕ ವೃತ್ತಿಯಲ್ಲಿ ಶಾಲಾ ಮಕ್ಕಳ ಕಲಿಕಾ ಗುಣಮಟ್ಟ ಹಾಗೂ ಶಾಲಾ ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ದಾನಿಗಳ ಮೂಲಕ ಶಾಲೆಗೆ ಶೌಚಾಲಯ ನಿರ್ಮಾಣ, ಗ್ರಂಥಾಲಯ, ನೋಟ್ ಪುಸ್ತಕಗಳು, ಡ್ರಮ್‍ಸೆಟ್, ಮಕ್ಕಳಿಗೆ ಯೋಗ ಸಮವಸ್ತ್ರ ಇತ್ಯಾದಿ ಸೇರಿದಂತೆ ಅನೇಕ ಶೈಕ್ಷಣಿಕ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಶ್ರಮವಹಿಸಿದ್ದಾರೆ. ರಾಜ್ಯಮಟ್ಟದ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಮೆಚ್ಚುಗೆ ಗಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಏರ್ಪಡಿಸುವ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಎರಡು ಬಾರಿ ಪ್ರಥಮ ಸ್ಥಾನ, ಮೂರು ಬಾರಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ದಶಕಗಳಿಂದಲೂ ಯೋಗಪಟುವಾಗಿ ಗುರುತಿಸಿಕೊಂಡು ಚಂದನವಾಹಿನಿಯಲ್ಲಿ ಯೋಗ ತರಬೇತಿ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಮಕ್ಕಳಿಗೆ ಯೋಗ ಮಾಡಿಸುವುದರ ಮೂಲಕ ಪೋಷಕರ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಗಮನ ಸೆಳೆದಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಇಂಗ್ಲಿಷ್ ಭಾಷಾ ತರಬೇತಿಗಳನ್ನು ಒಳಗೊಂಡಂತೆ ಅನೇಕ ತರಬೇತಿಗಳನ್ನು ನೀಡಿದ್ದಾರೆ.
ಮಹಿಳೆಯರ ಋತುಚಕ್ರದ ರಜೆಯನ್ನು ಕೊಡಿಸುವ ದೃಢಸಂಕಲ್ಪ ಮಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ, ಅತಿ ಹೆಚ್ಚಿನ ಮತಗಳಿಂದ ಗೆದ್ದು, ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಅನೇಕ ಬಾರಿ ಸಮಾಲೋಚಿಸಿ, ಮಹಿಳೆಯರ ಋತುಚಕ್ರ ರಜೆ ದೊರಕಿಸಿಕೊಡುವಲ್ಲಿ ಶಿಕ್ಷಕಿ ವಿಮಲಾಕ್ಷಿ ಅವರ ಸೇವೆ ಅಪಾರವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ.

































