ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿ ಢಾಕಾ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿಯವರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಜಾಮೀನು ಕೋರಿ ಚಟ್ಟೋಗ್ರಾಮ್ ನ್ಯಾಯಾಲಯಕ್ಕೆ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅರ್ಜಿ ಸಲ್ಲಿಸಿದ್ದರು. ಢಾಕಾದಿಂದ ಆಗಮಿಸಿದ್ದ ಸುಪ್ರೀಂಕೋರ್ಟ್‌ನ 11 ವಕೀಲರ ತಂಡವು ವಾದ ಮಂಡಿಸಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶ ಎಂ.ಡಿ ಸೈಫುಲ್ ಇಸ್ಲಾಂ ಅವರಿದ್ದ ಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ನಾವು ನ್ಯಾಯಾಲಯದ ಮುಂದೆ ನಮ್ಮ ವಾದವನ್ನು ಮಂಡಿಸಿದ್ದೇವೆ. ಆದರೆ ಪ್ರಾಸಿಕ್ಯೂಷನ್ ಜಾಮೀನನ್ನು ವಿರೋಧಿಸಿತು. ಈ ಹಿನ್ನಲೆ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ನಾವು ಉನ್ನತ ನ್ಯಾಯಾಲಯಕ್ಕೆ ತೆರಳಿ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಬಾಂಗ್ಲಾದೇಶದ ಮಾಜಿ ಡೆಪ್ಯುಟಿ ಅಟಾರ್ನಿ ಜನರಲ್ ಅಪುರ್ಬಾ ಕುಮಾರ್ ಭಟ್ಟಾಚಾರ್ಯ ಹೇಳಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದ ಸರ್ಕಾರ ಪತನದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ದಾಳಿ ನಡೆಯುತ್ತಿದೆ. ಇದನ್ನು ವಿರೋಧಿಸಿ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರು ಹಿಂದೂಗಳ ಪರ ಧ್ವನಿ ಎತ್ತಿದ್ದರು.