ಹೆಂಡತಿಯನ್ನು ಮನೆಗೆ ಬಾ ಎಂದು ಕರೆದಿದ್ದಕ್ಕೆ ಬಾವನಿಗೇ ಬಾಮೈದ ಚಾಕುವಿನಿಂದ ಇರಿದಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ನಗರದ ಗಾಜಿಪುರದಲ್ಲಿ ನಿವಾಸಿ ಆನಂದ್ ಎಂಬಾತನಿಗೆ ಟೋನಿ ಎನ್ನುವ ಯುವಕ ಚಾಕುವಿನಿಂದ ಇರಿದು ಕೊಲೆಗೆ ಯತ್ನ ನಡೆಸಿದ್ದಾನೆ. ಕಳೆದ ಎರಡು ವರ್ಷದ ಹಿಂದೆ ಸ್ನೇಹಾ ಎಂಬ ಯುವತಿಯನ್ನು ಪ್ರೀತಿಸಿ ಆನಂದ್ ಮದುವೆಯಾಗಿದ್ದ. ಬಳಿಕ ಗಂಡ ಹೆಂಡತಿಯ ಮಧ್ಯೆ ಜಗಳವಾಗಿ, ಹೆಂಡತಿ ಸ್ನೇಹಾ ತವರು ಮನೆ ಸೇರಿದ್ದಳು. ಈಗ, ಆನಂದ್ ತನ್ನ ಅಣ್ಣನ ಮದುವೆ ಹಿನ್ನೆಲೆ ಸ್ನೇಹಾಳನ್ನು ಮನೆಗೆ ಬರುವಂತೆ ಕರೆದಿದ್ದ. ಇದರಿಂದ ಕೋಪಗೊಂಡ ಬಾಮೈದ ಟೋನಿ ಮತ್ತು ಆತನ ಸ್ನೇಹಿತರು ಸೇರಿ, ಬಾವನನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗಾಯಾಳು ಆನಂದ್‌ಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಟ್ರಾಮ್ ಕೇರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.