ಚೆನ್ನೈ : ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಕಾವೇರಿ ತೀರ ಪ್ರದೇಶದಲ್ಲಿನ ಭತ್ತದ ಬೆಳೆ ಹಾನಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನ. 26ರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭತ್ತದ ಬೆಳೆ ಭಾಗಶಃ ಹಾನಿಯಾಗಿದೆ. ಕಡಲೂರು, ತಿರುವಾರೂರ್, ತಿರುತುರೈಪೂಂಡಿ, ಮುತ್ತುಪೆಟ್ಟೈ, ಮೈಲಾಡುತುರೈ, ವೇದಾರಣ್ಯಂನಲ್ಲಿ ಭಾರೀ ಮಳೆ ಸುರಿದ ಪರಿಣಾಮ ಅಂದಾಜು ಕನಿಷ್ಠ 2,000 ಎಕರೆಗಿಂತ ಹೆಚ್ಚಿನ ಬೆಳೆ ನಷ್ಟವಾಗಿದೆ.
ವಿಪರೀತ ಮಳೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ತಿರುವಾರೂರು, ಕಡಲೂರು, ನಾಗಪತ್ತಿನಂ, ಮೈಲಾಡುತುರೈ ಜಿಲ್ಲೆಗಳಲ್ಲಿ ನವೆಂಬರ್ 27ರ ವರೆಗೆ ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈ, ಚೆಂಗಲ್ ಪೆಟ್, ಅರಿಯಲೂರ್, ಕಂಚೀಪುರದಲ್ಲಿ ಒಂದು ದಿನ ಶಾಲಾ ಕಾಲೇಜಿಗೆ ರಜೆ ಘೋಷಣೆ ನೀಡಲಾಗಿದೆ.
ಐಎಂಡಿ ಮತ್ತು ಪ್ರಾದೇಶಿಕ ಹವಾಮಾನ ಕೇಂದ್ರಗಳು ಇಂದು ನೀಡಿರುವ ಮುನ್ಸೂಚನೆ ಪ್ರಕಾರ, ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಇಂದಿನವರೆಗೆ ಚಂಡಮಾರುತ ಇರಲಿದ್ದು, ಕಡಲೂರು ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮುಂದಿನ ಮೂರು ದಿನ ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ