ದಾವಣಗೆರೆ: ಮಡಿವಾಳ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸ್ಥಾನಮಾನವನ್ನು ಪಡೆಯಬೇಕಾದರೆ, ನಮ್ಮ ಸಮುದಾಯವು ಪರಿಶಿಷ್ಟ ಜಾತಿಯ ವರ್ಗಕ್ಕೆ ಸೇರ್ಪಡೆ ಆಗಬೇಕು. ಇದಕ್ಕಾಗಿ ಸಂಘಟಿತ ಹೋರಾಟ ಅಗತ್ಯ ಎಂದು ಚಿತ್ರದುರ್ಗದ ಜಗದ್ಗುರು ಶ್ರೀಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಜಗದ್ಗುರು ಡಾ.ಶ್ರೀಬಸವ ಮಾಚಿದೇವ ಮಹಾಸ್ವಾಮಿಗಳು ಕರೆ ನೀಡಿದರು.
ನಗರದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರುವ ಜಿಲ್ಲಾ ಪಂಚಾಯತ ಸಮೀಪದ ಮಡಿಕಟ್ಟೆ (ಧೋಬಿಘಾಟ್) ನಲ್ಲಿ ಆಯೋಜಿಸಲಾಗಿದ್ದ ಶ್ರೀ ಬನ್ನಿ ಮಹಾಂಕಾಳಿ ದೇವಿಯ ಪೂಜಾ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಅನಾದಿ ಕಾಲದಿಂದಲೂ ತುಳಿತಕ್ಕೆ ಒಳಗಾಗಿರುವ ಮಡಿವಾಳ ಸಮುದಾಯವು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬರುತ್ತಿದೆ. ಅಂತೆಯೇ ನಾವುಗಳು
ಎಸ್ಸಿ ವರ್ಗಕ್ಕೆ ಸೇರುವ ಬಗ್ಗೆ ಸಂಘಟಿತರಾಗಿ ಹೋರಾಡಬೇಕು. ಆ ಮೂಲಕ ನಮ್ಮ ಸಮುದಾಯ ಈಗ ಹಾಲಿ ಇರುವ ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈಗ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಯಲ್ಲಿ ನಮ್ಮ ಸಮಾಜದ ಜನರು ಜಾತಿ ಗಣುತಿಯಲ್ಲಿ ಮಡಿವಾಳ ಎಂದು ಬರೆಸಿ ಬೇಕು ಎಂದು ಕರೆ ನೀಡಿದರು.
ದಾವಣಗೆರೆಯಲ್ಲಿ ಜಿಲ್ಲಾ ಮಂತ್ರಿ ಎಸ್ ಎಸ್ ಮಲ್ಲಿಕಾರ್ಜುನ ಅವರು ಸಮುದಾಯದ ಜನರ ಏಳಿಗೆಗಾಗಿ ವಿದ್ಯಾರ್ಥಿ ನಿಲಯ, ದೋಭಿಘಾಟ್ ಗೆ ಸೇರಿ ಓಟು 6 ಕೋಟಿ ರೂಪಾಯಿ ನೀಡಿದ್ದಾರೆ. ಇವತ್ತು ಕೂಡ ನೆಲಕ್ಕೆ ಕಾಂಕ್ರೀಟ್ ಹಾಕಿಸಲು ಮತ್ತು ನೆರಳಿನ ಮೇಲ್ಚಾವಣಿಗೆ ಬಣ್ಣ ಒಡೆಯಲು, 24*7 ಕರೆಂಟ್ ಸಂಪರ್ಕ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಆಪ್ತ ಸಹಾಯಕರಿಗೆ ತಿಳಿಸಿದ್ದಾರೆ. ಇಂತಹ ರಾಜಕಾರಣಿಗಳು ನಮ್ಮ ಸಮಾಜಕ್ಕೆ ಸಿಕ್ಕರೆ ಸೌಭಾಗ್ಯ ಇವರೊಟ್ಟಿಗೆ ಸಮಾಜ ಎಂದು ಕೂಡ ಚಿರಋಣಿಯಾಗಿರಬೇಕು ಎಂದು ಕರೆಕೊಟ್ಟರು.
ಸಮಾಜ ಬಾಂಧವರು ತಮ್ಮ ಕಾಯಕದ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಬೇಕು. ನಮ್ಮ ಕುಲ ಕಸುಬು ನಮಗೆ ಶ್ರೇಷ್ಠ ಎಂದು ಅರಿತಿರಬೇಕು. ನಾವು ಮಾಡುವ ವೃತ್ತಿಯ ಜಾಗ ನಮಗೆ ದೇವಸ್ಥಾನ ಇದ್ದಂತೆ. ನಾವು ನಮ್ಮ ಜಾಗಕ್ಕೆ ಬರುವಾಗ ಸಂಸ್ಕಾರದಿಂದ ನಮಸ್ಕರಿಸಿ ಬಂದಾಗ ನಮ್ಮೆಲ್ಲ ಸಂಕಷ್ಟಗಳು ನಿವಾರಣೆ ಆಗುತ್ತವೆ ಎಂದು ತಿಳಿಸಿದರು.
ಬಸವೇಶ್ವರ ಕಾಲದಲ್ಲಿ ನಮ್ಮ ಸಮುದಾಯದ ತಂದೆ ಮಡಿವಾಳ ಮಾಚಿದೇವರು ಶರಣರ ಬಟ್ಟೆಗಳನ್ನು ಮಡಿ ಮಾಡಿ ಕೊಡುವುದು ನನ್ನ ಕಾಯಕವೆಂದು ಹೇಳಿ ದುಷ್ಟರನ್ನು ಶಿಕ್ಷಿಸಿದಂತಹ, ಶಿವದೇವರ ಆದೇಶದಂತೆ ಕೆಲಸ ಮಾಡಿದಂತ ಧೀಮಂತ ನಾಯಕರಾದ ಮಾಚಿದೇವರ ಕುಲದಲ್ಲಿ ನಾವುಗಳು ಹುಟ್ಟಿರುವುದೇ ಸೌಭಾಗ್ಯ. ನಮ್ಮ ಕಸಬು ಕೀಳಲ್ಲ ಎಂಬುವ ಭಾವನೆಯಲ್ಲಿ ನಾವೆಲ್ಲಾ ದುಡಿಯಬೇಕು. ಮಾಚಿದೇವರು ಅಂದು ಬಿಜ್ಜಳರ ಸೈನ್ವನ್ನು ಹಿಮ್ಮೆಟ್ಟಿಸಿ ಅಣ್ಣ ಬಸವಣ್ಣ, ಅಕ್ಕಮಹಾದೇವಿಯವರ ಸಹಕಾರದೊಂದಿಗೆ ವಚನ ಸಾಹಿತ್ಯ ಭಂಡಾರವನ್ನು ಸಂರಕ್ಷಿಸಿದ ಧೀಮಂತ ನಾಯಕ ಎಂದು ಸ್ಮರಿಸಿದರು.
ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್. ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಮಡಿವಾಳ ಸಮುದಾಯವು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕು. ಅಲ್ಲದೇ ದೇವರಾಜ ಅರಸು ಬಡಾವಣೆಯಲ್ಲಿ ನಿರ್ಮಿಸುತ್ತಿರುವ ಬಾಲಕರ ವಸತಿ ನಿಲಯವನ್ನು ಪೂರ್ಣ ಗೊಳಿಸಿ, ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ನೀಡಲಾಗಿರುವ ಬಾಲಕಿಯರ ವಸತಿ ನಿಲಯಕ್ಕೆ ಕಾಮಗಾರಿ ಆರಂಭಿಸಿ, ಆ ಮೂಲಕ ಸಮುದಾಯದ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ , ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ ಅವರಗೆರೆ, ಮುದೇಗೌಡರ ಗಿರೀಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಂಜುನಾಥ್ ಗಡಿಗುಡಾಳ್, ಮಂತ್ರಿಗಳ ಆಪ್ತ ಸಹಾಯಕ ನಾಗರಾಜ್, ರಮೇಶ್, ಸಮಾಜದ ಮುಖಂಡರಾದ ಓಂಕಾರಪ್ಪ, ರಾಷ್ಟ್ರೀಯ ಯೋಗಪಟು ಡಾ.ಎನ್.ಪರಶುರಾಮ್, ದುಗ್ಗಪ್ಪ, ಗುಡ್ಡಪ್ಪ, ರುದ್ರೇಶ್, ಪಿ.ಮಂಜುನಾಥ್, ಕೋಗುಂಡೆ ಸುರೇಶ್, ಕುಮಾರ್, ರವಿ ಕುಮಾರ್, ಪ್ರವೀಣ್, ಪಕ್ಕೀರಸ್ವಾಮಿ, ಹಿರಿಯರಾದ ಮಲ್ಲೇಶಪ್ಪ, ನಾಗಮ್ಮ, ಮಂಗಳಮ್ಮ ಇತರರಿದ್ದರು.