ಚಿತ್ರದುರ್ಗ: ಆರೋಗ್ಯಕರ ಬೆಳವಣಿಗೆಗೆ ರಂಗಭೂಮಿ ಅಗತ್ಯವಾಗಿದೆ. ಜಾಲತಾಣಗಳ ಅತಿರೇಕಗಳಿಗೆ ಬೇಸತ್ತ ಜನ ಮತ್ತೆ ರಂಗಭೂಮಿಯತ್ತ ವಾಲುತ್ತಿರುವುದು ಸಂತಸ ತಂದಿದೆ. ಸಾಂಸಾರಿಕ ಸಹಬಾಳ್ವೆಗೆ ಹಾಗೂ ಉತ್ತಮ ಬಾಂಧವ್ಯಕ್ಕೆ ರಂಗಭೂಮಿ ಸಹಕಾರಿಯಾಗಿದೆ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಸಂಜೆ ೬ ಗಂಟೆಗೆ ಕನ್ನಡ ರಾಜ್ಯೋತ್ಸವ, ಮಕ್ಕಳ ಕಲರವ ಮತ್ತು ಶಿವಸಂಚಾರ ನಾಟಕೋತ್ಸವ ೨೦೨೪ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ಒಂದು ನಾಟಕ ವೀಕ್ಷಿಸಿದರೆ ಹಲವು ಪುಸ್ತಕಗಳನ್ನು ಓದಿದ ಅನುಭವವಾಗುತ್ತದೆ. ನಾಟಕ ನೋಡುವ ಮನಸ್ಸುಗಳು ಹೆಚ್ಚಾಗಬೇಕು. ಉತ್ತಮ ಜೀವನಕ್ರಮವನ್ನು ಕಲ್ಪಿಸುವ ರಂಗಭೂಮಿಯನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಾಟಕೋತ್ಸವಕ್ಕೆ ಪಾಶ್ಚಾತ್ಯ ಸಂಗೀತವಾದ್ಯ ಜಂಬೆ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಭವಿಷ್ಯದ ಪೀಳಿಗೆಗೆ ಸಾಹಿತ್ಯ, ಸಾಂಸ್ಕೃತಿಕ ಮತ್ತು ನಾಟಕಗಳ ಅಭಿರುಚಿ ಬೆಳೆಸಬೇಕಿದೆ. ಪ್ರೇಕ್ಷಕರು ನಾಟಕಗಳಲ್ಲಿ ಬರುವ ಪಾತ್ರಗಳೊಂದಿಗೆ ಸಮ್ಮಿಳನಗೊಂಡು ಅದರಿಂದ ಜೀವನಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳಬೇಕು. ಆಗ ಮಾತ್ರ ನಾಟಕಗಳಲ್ಲಿ ಬರುವ ವಿಷಯವಸ್ತುವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ನಾಟಕಗಳು ಪ್ರತಿಯೊಬ್ಬರ ಆಂತರಿಕ ಮನೋಧರ್ಮಗಳನ್ನು ಗಟ್ಟಿಗೊಳಿಸುತ್ತವೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆಎಮ್ ವೀರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿತ್ರದುರ್ಗ ನಗರದಲ್ಲಿ ಶಿವಸಂಚಾರ, ನೀನಾಸಂ ಹಾಗೂ ಹವ್ಯಾಸಿ ರಂಗಕರ್ಮಿಗಳ ನಾಟಕಗಳು ನಿರಂತರವಾಗಿ ನಾಟಕಗಳನ್ನು ಪ್ರದರ್ಶಿಸುತ್ತಿವೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಂಗ ಕಲಾವಿದರಿಗೆ ಮತ್ತಷ್ಟು ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕು. ನಾಟಕ, ಕಲೆ, ಸಾಹಿತ್ಯ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ನಾಟಕಕಾರ ಮತ್ತು ಆರ್ಥಿಕತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಬಾಪೂಜಿ ಸಮೂಹ ಸಂಸ್ಥೆಯ ನಿರ್ದೇಶಕ ಕೆಎಮ್ ಚೇತನ್, ಶಸಾಪ ತಾಲ್ಲೂಕಧ್ಯಕ್ಷ ಷಡಾಕ್ಷರಯ್ಯ, ರಂಗನಿರ್ದೇಶಕ ಕೆಪಿಎಮ್ ಗಣೇಶಯ್ಯ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಪ್ರೊ.ಎಂ.ಆರ್. ಜಯಲಕ್ಷಿö್ಮ, ಪ್ರ.ಕಾರ್ಯದರ್ಶಿ ಶೋಭಾ ಮಲ್ಲಿಕಾರ್ಜುನ್, ಸ.ಕಾರ್ಯದರ್ಶಿ ಶೈಲಜಾಬಾಬು, ಗ್ರಾ.ಪಂ ಸದಸ್ಯೆ ಜ್ಯೋತಿ ದೇವೇಂದ್ರಪ್ಪ ಉಪಸ್ಥಿತರಿದ್ದರು.
ದಾವಣಗೆರೆಯ ಸಂಗೀತ ವಿದ್ವಾನ್ ಆನಂದಕುಮಾರ್ ಪಾಟೀಲ್ ಹಿಂದೂಸ್ತಾನಿ ಸಂಗೀತಗಾಯನ ಪ್ರಸ್ತುತಪಡಿಸಿದರು. ನಾಟಕಕಾರ ಬಿ.ಆರ್.ಪೊಲೀಸ್ ಪಾಟೀಲ್ ವಿರಚಿತ ನಾಟಕ ತುಲಾಭಾರ ವಿಶ್ವೇಶ್ವರೀ ಹಿರೇಮಠ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.
ಚಿತ್ರದುರ್ಗ ಜಿಲ್ಲೆಯ ನಾಗರಿಕರು, ರಂಗಾಸಕ್ತರು, ಜಿಲ್ಲಾಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಉಪನ್ಯಾಸಕರು, ಕಲಾವಿದರು, ಸಾಹಿತಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನ ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.