ಬೆಂಗಳೂರು : ವಲಯವಾರು ಬಜೆಟ್ ಮಂಡಿಸುವ ಚಿಂತನೆ ಕೈಬಿಟ್ಟಿರುವ ಬಿಬಿಎಂಪಿಯು ಈ ಬಾರಿಯೂ ಹಿಂದಿನ ಪದ್ಧತಿಯಂತೆ ಕೇಂದ್ರೀಕೃತ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬಿಬಿಎಂಪಿಯ 8 ವಲಯಗಳಿಗೆ 8 ಐಎಎಸ್ ಅಧಿಕಾರಿಗಳನ್ನು ವಲಯ ಆಯುಕ್ತರಾಗಿ ನಿಯೋಜನೆ ಮಾಡಿ ಮುಖ್ಯ ಆಯುಕ್ತರ ಅಧಿಕಾರವನ್ನು ವಿಕೇಂದ್ರಿಕರಣ ಮಾಡಲಾಗಿದೆ. ಅದರಂತೆ ವಲಯ ಮಟ್ಟದಲ್ಲಿಯೇ ಬಿಲ್ ಪಾವತಿ ಸೇರಿದಂತೆ ಮೊದಲಾದ ಕಾರ್ಯಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು 2025-26ನೇ ಸಾಲಿನ ಬಜೆಟ್ ಅನ್ನು ವಲಯವಾರು ವಿಭಜಿಸಿ ಮಂಡಿಸುವುದಕ್ಕೆ ಚಿಂತನೆ ನಡೆಸಿತ್ತು. ಈ ಕುರಿತು ಬಿಬಿಎಂಪಿಯ ಮುಖ್ಯ ಆಯುಕ್ತರು ಹಾಗೂ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಎಲ್ಲ ವಲಯ ಆಯುಕ್ತರಿಗೆ ಪ್ರತ್ಯೇಕವಾಗಿ ಬಜೆಟ್ ಬೇಡಿಕೆ ಸಲ್ಲಿಸುವುದಕ್ಕೂ ಸೂಚನೆ ನೀಡಲಾಗಿತ್ತು. ಅದರಂತೆ ಬೇಡಿಕೆಯನ್ನು ಈಗಾಗಲೇ ಸಲ್ಲಿಕೆ ಮಾಡಿದ್ದಾರೆ. ಅದನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು ವಲಯವಾರು ಬಜೆಟ್ ಮಂಡನೆಯಿಂದ ಎದುರಾಗುವ ಸವಾಲುಗಳು, ಅಸಮತೋಲನಗಳನ್ನು ಮನಗಂಡು ಇದೀಗ ಈ ಹಿಂದಿನ ಪದ್ಧತಿಯಂತೆಯೇ ಕೇಂದ್ರೀಕೃತ ಬಜೆಟ್ ಮಂಡಿಸುವುದಕ್ಕೆ ನಿರ್ಧಸಿದ್ದಾರೆ. ಕಳೆದ ವರ್ಷ 13 ಸಾವಿರ ಕೋಟಿ ರು. ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಈ ಬಾರಿಯೂ 13 ರಿಂದ 14 ಸಾವಿರ ಕೋಟಿ ರು. ಮೊತ್ತದ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಅವರು ಮೊದಲ ಸುತ್ತಿನ ಸಭೆ ನಡೆಸಿದ್ದು, ಫೆಬ್ರವರಿ ಮೊದಲವಾರದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ.