ಬೆಂಗಳೂರು: ಕ್ರಿಕೆಟ್ ಜೊತೆಗೆ ಕೊಹ್ಲಿ ಹೋಟೆಲ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇವರ ಸಹಮಾಲೀಕತ್ವದಲ್ಲಿ ನಡೆಯುತ್ತಿರುವ ಒನ್ 8 ಕಮುನೆ ಎನ್ನುವ ಬಾರ್ ಅಂಡ್ ರೆಸ್ಟೋರೆಂಟ್ ಬೆಂಗಳೂರಿನಲ್ಲೂ ಒಂದು ಬ್ರ್ಯಾಂಚ್ ಹೊಂದಿದ್ದು, ಯಾವುದೇ ಪ್ರಮಾಣ ಪತ್ರಗಳನ್ನು ಪಡೆಯದೇ ನಡೆಸುತ್ತಿರುವ ಕಾರಣ ಬಿಬಿಎಂಪಿ ನೋಟಿಸ್ ನೀಡಿದೆ. ಅಲ್ಲದೇ ನೋಟಿಸ್ ತಲುಪಿದ 7 ದಿನಗಳ ಒಳಗೆ ಪ್ರತ್ಯುತ್ತರ ನೀಡದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹೇಳಿದೆ.
ಸಿಲಿಕಾನ್ ಸಿಟಿಯ ಪೂರ್ವ ವಲಯದ ಶಾಂತಿನಗರ ವಿಭಾಗದ ವಾರ್ಡ್ ಸಂಖ್ಯೆ 167ರ ಎಂ.ಜಿ ರಸ್ತೆಯ ರತ್ನಂ ಕಾಂಪ್ಲೆಕ್ಸ್ನಲ್ಲಿ ವಿರಾಟ್ ಕೊಹ್ಲಿಯ ಒನ್ 8 ಕಮುನೆ ರೆಸ್ಟೋರೆಂಟ್ ಇದೆ. ಇದು ಅಗ್ನಿ ಶಾಮಕ ಇಲಾಖೆಯಿಂದ ನಕ್ಷೆ, ಪ್ರಮಾಣ ಪತ್ರ ಹಾಗೂ ಎನ್ಒಸಿ, ಅನುಮತಿ ಪರವಾನಗಿ (ಲೈಸೆನ್ಸ್) ಪ್ರಮಾಣ ಪತ್ರಗಳನ್ನು ಪಡೆದಿಲ್ಲ. ಈ ಯಾವುದು ಪ್ರಮಾಣ ಪತ್ರ ಇಲ್ಲದೇ ವಿರಾಟ್ ಕೊಹ್ಲಿ ಸಹಮಾಲಿಕತ್ವದಲ್ಲಿ ರೆಸ್ಟೋರೆಂಟ್ ನಡೆಸಲಾಗುತ್ತಿದೆ.
ಸಾಮಾಜಿಕ ಕಾರ್ಯಕರ್ತ ಹೆಚ್.ಎಂ ವೆಂಕಟೇಶ್ ಮತ್ತು ಕುಣಿಗಲ್ ನರಸಿಂಹ ಮೂರ್ತಿ ದೂರು ನೀಡಿದ್ದರು. 29 ನವೆಂಬರ್ 2024ರಂದು ತಿಳುವಳಿಕೆ ಪತ್ರ ನೀಡಿದ್ದರೂ ಯಾವುದೇ ಕ್ರಮದ ಬಗ್ಗೆ ಪ್ರತ್ಯುತ್ತರ ನೀಡಿರಲಿಲ್ಲ. ಇದರಿಂದ ಈಗ ನೀಡಲಾದ ನೋಟಿಸ್ ತಲುಪಿದ 7 ದಿನಗಳ ಒಳಗೆ ಲಿಖಿತ ರೂಪದಲ್ಲಿ ಸಮಾಜಾಯಿಷಿ ನೀಡಬೇಕು ಎಂದು ಖಡಕ್ ಆಗಿ ಬಿಬಿಎಂಪಿ ಹೇಳಿದೆ.