ಬೆಂಗಳೂರು: ಹಬ್ಬಗಳು, ಹೊಸ ವರ್ಷದಂತಹ ವಿಶೇಷ ಸಂದರ್ಭಗಳನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ನಕಲಿ ಜಾಲವನ್ನು ಹರಡುತ್ತಿದ್ದಾರೆ. ಆಫರ್ಗಳು, ಗಿಫ್ಟ್ಗಳು, ಕ್ಯಾಶ್ಬ್ಯಾಕ್ ಎನ್ನುವ ಆಕರ್ಷಕ ಸಂದೇಶಗಳನ್ನು ವಾಟ್ಸ್ಆಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಕಳುಹಿಸಲಾಗುತ್ತಿದೆ. ಇಂತಹ ಸಂದೇಶಗಳಲ್ಲಿರುವ ಲಿಂಕ್ಗಳನ್ನು ತಿಳಿಯದೇ ಒಂದು ಬಾರಿ ಕ್ಲಿಕ್ ಮಾಡಿದರೂ ಬ್ಯಾಂಕ್ ಖಾತೆ ಲೂಟಿ ಆಗುವ ಸಾಧ್ಯತೆ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಜನರು ಮೋಸದ ಜಾಲಕ್ಕೆ ಬಲಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಲಿಂಕ್ಗಳು, ಅನುಮಾನಾಸ್ಪದ ಆಫರ್ ಸಂದೇಶಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ವಿಶೇಷವಾಗಿ ಹೊಸ ವರ್ಷದ ಶುಭಾಶಯಗಳನ್ನು ಕಳುಹಿಸುವಾಗ ಸಾಮಾಜಿಕ ಜಾಲತಾಣದ ಲಿಂಕ್ಗಳ ಬದಲು ಸಾಮಾನ್ಯ ಟೆಕ್ಸ್ಟ್ ಮೆಸೇಜ್ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೇ ಜಾಗೃತಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಒಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಒಂದು ಓಡೋ ಕುದುರೆಯಂತೆ ವೇಗವಾಗಿ ಸಾಗುತ್ತಿದೆ. ಆದರೆ ಅದನ್ನು ನಿಯಂತ್ರಿಸಬೇಕಾದ ಜಾಕಿಗಳು ಅಂದರೆ ಯೂಸರ್ಸ್ಗಳೇ ಕಣ್ಣು ಕಟ್ಟಿಕೊಂಡು ದಾರಿ ತಪ್ಪುತ್ತಿರುವುದು ವಿಪರ್ಯಾಸ. ಇನ್ನಾದರೂ ಜನರು ಸ್ವಲ್ಪ ಎಚ್ಚರಿಕೆ ವಹಿಸಿ, ಜಾಗರೂಕತೆಯಿಂದ ಸೋಷಿಯಲ್ ಮೀಡಿಯಾವನ್ನು ಬಳಸುವ ಅಗತ್ಯವಿದೆ.
































