ಬೆಂಗಳೂರು : ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸದಸ್ಯ ಕಿರಣ್ ಹೆಬ್ಬಾರ್ ಅವರು ಸರ್ಕಾರದ ವಿರುದ್ಧ ಪ್ರಶ್ನಿಸಿ ಪತ್ರ ಬರೆದಿದ್ದ ವಿಷಯದ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನನ್ನನ್ನು ಹೆದರಿಸಲು ಬರಬೇಡಿ, ನಾನು ಯಾರಿಗೂ ಹೆದರಲ್ಲ ಎಂದು ಕಿಡಿಕಾರಿದ ಅವರು, ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೂ ಹೆದರದೇ ಜೈಲಿಗೆ ಹೋಗಿರುವೆ, ಇವನು ಯಾರು? ಹೆಬ್ಬಾರ್‌ಗೆ ನಾನು ಹೆದರಬೇಕಾ ಎಂದು ಕಠಿಣವಾಗಿ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಲಕ್ಷಾಂತರ ನಿವಾಸಿಗಳ ಸಮಸ್ಯೆಗಳು, ಹಕ್ಕುಗಳು ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಇಂದು ಬೆಳಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಈ ಸಭೆಯನ್ನು ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ ಸಂಯುಕ್ತವಾಗಿ ಆಯೋಜಿಸಿತ್ತು. ಈ ಸಭೆಯಲ್ಲಿ ಡಿಸಿಎಂ ಡಿಕೆಶಿ ಮಾತನಾಡಿದರು.
ನನಗೆ ವಾರ್ನಿಂಗ್ ಕೊಡುವುದು ಅಥವಾ ಎಚ್ಚರಿಕೆ ನೀಡುವುದು ನಡೆಯುವುದಿಲ್ಲ. ಬೇಸಿಕ್ ಕಾಮನ್ ಸೆನ್ಸ್ ಇಟ್ಟುಕೊಂಡು ನನ್ನೊಂದಿಗೆ ಮಾತನಾಡಬೇಕು. ಸರ್ಕಾರವನ್ನು ಬೆದರಿಸುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ, ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಿ, ಆದರೆ ಸರ್ಕಾರವನ್ನು ಹೆದರಿಸಲು ಬರಬೇಡಿ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಭ್ರಮೆ ಬೇಡ, ಬೆದರಿಕೆ ರಾಜಕಾರಣ ನಮ್ಮ ಸರ್ಕಾರದ ವಿರುದ್ಧ ನಡೆಯುವುದಿಲ್ಲ. ನಾನು ನೇರವಾಗಿ ಮತ್ತು ದಿಟ್ಟವಾಗಿ ಮಾತನಾಡುತ್ತೇನೆ. ಕೆಲವೊಮ್ಮೆ ಕಟುವಾಗಿ ಮಾತಾಡಿದರೂ ಮನಸ್ಪೂರ್ತಿಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನಿಮ್ಮನ್ನು ಸಭೆಗೆ ಕರೆಯಲೇಬೇಕು ಎನ್ನುವ ಯಾವುದೇ ನಿಯಮವಿಲ್ಲ. ಆದರೂ ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆಗಳನ್ನು ಕೇಳಲು ನಿಮ್ಮೆಲ್ಲರನ್ನು ಕರೆದು ಮಾತನಾಡುತ್ತಿದ್ದೇವೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಮಗೆ ತಲುಪಿಲ್ಲವೇ? ನಮ್ಮ ಗ್ಯಾರಂಟಿಗಳನ್ನು ಬಿಜೆಪಿ ಕೂಡ ತನ್ನ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೆ ತರುತ್ತಿದೆ. ಈ ವಿಚಾರಗಳನ್ನು ಮೊದಲು ತಿಳಿದುಕೊಳ್ಳಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ಅಪಾರ್ಟ್‌ಮೆಂಟ್ ಕ್ಷೇತ್ರದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸಾವಿರಾರು ಅಪಾರ್ಟ್‌ಮೆಂಟ್‌ಗಳನ್ನು ನಾನು ಕಟ್ಟಿದ್ದೇನೆ, ಜಾಗಗಳನ್ನು ಒದಗಿಸಿದ್ದೇನೆ. ನಮ್ಮ ಅಧಿಕಾರಿಗಳು ಸಹಕರಿಸದಿದ್ದರೆ ಏನು ಮಾಡ್ತೀರಾ? ನನ್ನ ಮೇಲೆ ವಿಶ್ವಾಸ ಇಟ್ಟು ನೀವು ಬಂದಿದ್ದೀರಿ, ಎಲ್ಲರನ್ನೂ ದೂಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ನಡೆದ ಈ ಸಭೆ, ಡಿಸಿಎಂ ಅವರ ಕಠಿಣ ಪ್ರತಿಕ್ರಿಯೆಯಿಂದ ರಾಜಕೀಯ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.

































