ಬೆಂಗಳೂರು : ರಾಜ್ಯದ ಜಿಪಂ, ತಾಪಂ, ಗ್ರಾಪಂ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆ ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮೇ ಅಥವಾ ಜೂನ್ ಅಂತ್ಯದೊಳಗೆ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಯ 369 ವಾರ್ಡ್ಗಳ ಕರಡು ಮತದಾರರ ಪಟ್ಟಿ ಪ್ರಕಟಿಸಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಪಂ, ತಾಪಂ, ಗ್ರಾಪಂ, ಸ್ಥಳೀಯ ಸಂಸ್ಥೆಗಳು ಹಾಗೂ ಜಿಬಿಎ ಐದು ನಗರ ಪಾಲಿಕೆಯ ಚುನಾವಣೆಯನ್ನು ಮತಪತ್ರದ ಮೂಲಕ ನಡೆಸಲು ತೀರ್ಮಾನಿಸಲಾಗಿದೆ. ಜಿಬಿಎ ಕಾಯ್ದೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಸ್ಪಷ್ಟವಾದ ಅವಕಾಶವಿದೆ. ಕಾಯ್ದೆಯಲ್ಲಿ ಅವಕಾಶವಿರುವಾಗ ಬಳಕೆ ಮಾಡಲು ಯಾವುದೇ ಅಡ್ಡಿಯಿಲ್ಲ. ಸುಪ್ರೀಂ ಕೋರ್ಟ್ನ ಯಾವುದೇ ತೀರ್ಪಿನಲ್ಲಿ ಅಥವಾ ದೇಶದ ಯಾವುದೇ ಕಾನೂನಿನಲ್ಲಿ ಬ್ಯಾಲೆಟ್ ಪೇಪರ್ ಬಳಕೆ ನಿಷೇಧಿಸಲಾಗಿದೆ ಎಂಬ ಪ್ರಸ್ತಾಪವಿಲ್ಲ. ನಿಯಮಗಳ ಚೌಕಟ್ಟಿನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಹೊರತುಪಡಿಸಿ ಉಳಿದಂತೆ ಗ್ರಾಪಂ ಹಾಗೂ ಸಹಕಾರಿ ಸಂಘ-ಸಂಸ್ಥೆಯ ಚುನಾವಣೆಯನ್ನು ಮತಪತ್ರದ ಮೂಲಕವೇ ನಡೆಸಲಾಗುತ್ತಿದೆ. ಅಮೆರಿಕ ಸೇರಿ ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇಂದಿಗೂ ಬ್ಯಾಲೆಟ್ ಪೇಪರ್ ಮೂಲಕವೇ ಪಾರದರ್ಶಕವಾಗಿ ಚುನಾವಣೆ ನಡೆಸಲಾಗುತ್ತಿದೆ. ಹೀಗಿರುವಾಗ ಬ್ಯಾಲೆಟ್ ಪೇಪರ್ ಬಳಸಿದರೆ ಅದು ಹಿನ್ನಡೆ ಎಂದು ಭಾವಿಸುವುದು ಸರಿಯಲ್ಲ. ಆಧುನಿಕ ತಂತ್ರಜ್ಞಾನಕ್ಕಿಂತಲೂ ನಂಬಿಕೆ ಮತ್ತು ಕಾನೂನಿನ ಅನುಷ್ಠಾನ ಮುಖ್ಯವಾಗಿರುತ್ತದೆ ಎಂದರು.

































