ಬೆಂಗಳೂರು: ಕರ್ತವ್ಯ ಲೋಪ ಆರೋಪದ ಮೇಲೆ ಜ್ಞಾನಭಾರತಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಎಸ್. ರವಿ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅದೇಶಿಸಿದ್ದಾರೆ.
2025ರ ಸೆಪ್ಟೆಂಬರ್ ಮೊದಲ ವಾರ ಅನ್ನಪೂರ್ಣೇಶ್ವರಿ ನಗರ ನಿವಾಸಿ ದೀಪಕ್ ರಾಜ್(18) ಎಂಬ ಯುವಕನನ್ನು ಮಲ್ಲತಹಳ್ಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಜ್ಞಾನಭಾರತಿ ಠಾಣಾಧಿಕಾರಿ ರವಿ ಅವರು ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ನೆಪ ಹೇಳಿ ಯಾವುದೇ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರದಲ್ಲಿ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿರುವುದು ಗೊತ್ತಾಗಿತ್ತು. ಹೀಗಾಗಿ ಮತ್ತೆ ಇದೇ ಠಾಣೆಗೆ ಕೊಲೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು. ಸೆಪ್ಟೆಂಬರ್ 13ರಂದು ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು. ಕೊಲೆ ಪ್ರಕರಣದಲ್ಲಿ ಕರ್ತವ್ಯ ಮತ್ತು ನಿರ್ಲಕ್ಷ್ಯದ ಆರೋಪದ ಮೇರೆಗೆ ಎಂ.ಎಸ್. ರವಿ ವಿರುದ್ಧ ಡಿಸಿಪಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದು, ಇದನ್ನು ಆಧರಿಸಿ ರವಿ ಅವರನ್ನು ಅಮಾನತು ಮಾಡಲಾಗಿದೆ.

































