ತೂಕ ಇಳಿದರೂ ಹೊಟ್ಟೆ ಕರಗುತ್ತಿಲ್ಲವೇ? ಇಲ್ಲಿದೆ ಕಾರಣ

WhatsApp
Telegram
Facebook
Twitter
LinkedIn

ತೂಕ ಇಳಿಸುವ ಉದ್ದೇಶ ನಿಮ್ಮದು. ಅದಕ್ಕಾಗಿ ಸಾಕಷ್ಟು ಬೆವರು ಹರಿಸುತ್ತಿದ್ದೀರಿ, ಆಹಾರವನ್ನೂ ಮಾರ್ಪಾಡು ಮಾಡಿಕೊಂಡಿದ್ದೀರಿ. ಸುಮಾರು ತಿಂಗಳ ಶ್ರಮದ ನಂತರ ತೂಕವೂ ನಿಮ್ಮ ಲೆಕ್ಕಾಚಾರದಂತೆ ಕಡಿಮೆಯಾಗುತ್ತಿದೆ. ಉಳಿದಿದ್ದೆಲ್ಲಾ ಸರಿ, ಆದರೆ ಹೊಟ್ಟೆ ಮಾತ್ರ ಹತ್ತಿಯ ದಿಂಬಿನಂತೆ ಹಾಗೆಯೇ ಕುಳಿತಿದೆ. ಒಳಗೂ ಹೋಗುತ್ತಿಲ್ಲ, ಬಿಗಿಯೂ ಆಗಿತ್ತಿಲ್ಲ. ಇಷ್ಟೆಲ್ಲಾ ದೇಹತೂಕ ಇಳಿದರೂ ಹೊಟ್ಟೆ ಮಾತ್ರ ಬಡಪಟ್ಟಿಗೆ ಜಗ್ಗುತ್ತಿಲ್ಲವಲ್ಲ…ಹೀಗೇಕೆ? ಈ ಸಮಸ್ಯೆ ಒಬ್ಬರದ್ದಲ್ಲ, ಹಲವರದ್ದು. ಎಷ್ಟೇ ತೂಕ ಇಳಿಸಿದರೂ ದೇಹಕ್ಕೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಹೊಟ್ಟೆ ಗಟ್ಟಿಯಾಗಿ ಕುಳಿತಿರುತ್ತದೆ (Belly Fat), ಸೊಂಟದ ಸುತ್ತಲಿನ ಭಾಗದಿಂದ ಕೊಬ್ಬು ಸುಲಭಕ್ಕೆ ಕರಗುವುದೇ ಇಲ್ಲ ಎಂದು ದೂರುವವರು ಬಹಳ ಮಂದಿ ಇದ್ದಾರೆ. ಅವರ ಆರೋಪ ಸುಳ್ಳಲ್ಲ. ಹೀಗಾಗುವುದಕ್ಕೆ ಕಾರಣಗಳಿವೆ. ಏನು ಆ ಕಾರಣಗಳು ಮತ್ತು ಅವುಗಳನ್ನು ಹೇಗೆ ಸರಿ ಮಾಡಿಕೊಳ್ಳಬಹುದು ಎನ್ನುವ ವಿವರಗಳು ಇಲ್ಲಿವೆ.

ಕಾರ್ಟಿಸೋಲ್‌ ಮಟ್ಟ

ದೇಹದಲ್ಲಿ ಉತ್ಪತ್ತಿಯಾಗುವ ಬಹಳಷ್ಟು ರೀತಿಯ ಚೋದಕಗಳಲ್ಲಿ ಕಾರ್ಟಿಸೋಲ್‌ ಸಹ ಒಂದು. ದೇಹದಲ್ಲಿ ಒತ್ತಡ ಹೆಚ್ಚಾದಾಗ ಈ ಹಾರ್ಮೋನು ಬಿಡುಗಡೆಯಾಗುತ್ತದೆ. ಈ ಹಾರ್ಮೋನಿನ ಮುಖ್ಯ ಗುಣಗಳಲ್ಲಿ ಒಂದೆಂದರೆ ಕೊಬ್ಬನ್ನು ಶೇಖರಿಸುವುದು, ಅದರಲ್ಲೂ ನಡುಭಾಗವನ್ನು ಕೊಬ್ಬಿಸುವುದು. ಹಾಗಾಗಿ ದೇಹದಲ್ಲಿ ಕಾರ್ಟಿಸೋಲ್‌ ಪ್ರಮಾಣ ಹೆಚ್ಚದಂತೆ ಎಚ್ಚರವಹಿಸಿ. ಅಂದರೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ.

ಕೋರ್‌ ವ್ಯಾಯಾಮ

ಒಂದೇ ಬಗೆಯ ವ್ಯಾಯಾಮಕ್ಕೆ ಅಂಟಿಕೊಂಡರೂ ಬೇಕಾದ ಫಲಿತಾಂಶ ದೊರೆಯುವುದು ತಡವಾಗಬಹುದು. ತೂಕ ಇಳಿಸುವುದಕ್ಕೆಂದು ಕೇವಲ ಕಾರ್ಡಿಯೊ ಮಾದರಿಯ ವ್ಯಾಯಾಮಕ್ಕೆ ಅಂಟಿಕೊಂಡಿದ್ದರೆ ಆಗುವ ತೊಡಕುಗಳಿವು. ದಿನವೂ ಬೆಳಗು-ಬೈಗು ವಾಕಿಂಗ್‌ ಮಾಡುತ್ತೀರಿ ಅಥವಾ ಥ್ರೆಡ್‌ಮಿಲ್‌ ಮೇಲೆ ಓಡುತ್ತೀರಿ ಎಂದಾದರೆ ತೂಕ ಇಳಿಯುವುದು ಹೌದಾದರೂ ಹೊಟ್ಟೆ ಕರಗದೆ ಇರಬಹುದು. ಇದಕ್ಕಾಗಿ ದೇಹದ ನಡುಭಾಗ ಅಥವಾ ಕೋರ್‌ ಬಲಗೊಳಿಸುವ ವ್ಯಾಯಾಮಗಳು ಬೇಕು. ಆಗಷ್ಟೇ ಈ ಭಾಗದ ಸ್ನಾಯುಗಳನ್ನು ಬಲಗೊಳಿಸಲು ಸಾಧ್ಯ.

ಚೀಟ್‌ ಮೀಲ್ಸ್‌

ಕಟ್ಟುನಿಟ್ಟಾದ ಡಯೆಟ್‌ ನಿಯಮಗಳ ಅಡಿಯಲ್ಲಿ ನುಸುಳುವುದಕ್ಕೆ ಒಂದಿಷ್ಟು ಜಾಗವನ್ನು ಎಲ್ಲರೂ ಬಿಟ್ಟುಕೊಂಡಿರುತ್ತಾರೆ. ಈ ಚೀಟ್‌ ಮೀಲ್ಸ್‌ ಎಂದೇ ಕರೆಯಲಾಗುವ ಊಟದಲ್ಲಿ ತಮ್ಮಿಷ್ಟದ ತಿನಿಸುಗಳಿಗೆ ಜಾಗವನ್ನೂ ಮಾಡುವುದು ಸಾಮಾನ್ಯ. ಉದಾ, ವಾರಕ್ಕೊಂದು ಮಸಾಲೆಪುರಿ ಅಥವಾ ಪಿಜ್ಜಾ ಇತ್ಯಾದಿ. ವಾರದ ಉಳಿದೆಲ್ಲ ದಿನಗಳೂ ಲೆಕ್ಕಾಚಾರದಲ್ಲೇ ಇರಬೇಕು. ಇದರ ಬದಲು, ಲೆಕ್ಕ ತಪ್ಪುವ ದಿನಗಳೇ ಹೆಚ್ಚಾಗಿಬಿಟ್ಟರೆ…? ವಾರಕ್ಕೊಂದು ಮಸಾಲೆಪುರಿಯ ಬದಲು ವಾರಕ್ಕೆ ಮೂರಾದರೆ ಬೇಕಾದ ಫಲಿತಾಂಶ ದೊರೆಯಲು ಕಷ್ಟವಾಗಬಹುದು.

ನಿದ್ದೆ ಸಾಕಾಗದಿದ್ದರೆ

ಇದಂತೂ ನಿಶ್ಚಿತವಾಗಿ ಸತ್ಯ. ನಿದ್ದೆ ಸಾಕಾಗದಿದ್ದರೆ ಅಥವಾ ಅವಿಶ್ರಾಂತ ದುಡಿಮೆಯಲ್ಲಿದ್ದರೆ ದೇಹದಲ್ಲಿ ಹಾರ್ಮೋನುಗಳ ಮಟ್ಟ ಏರುಪೇರಾಗುವುದು ಖಂಡಿತ. ಇದರಿಂದ ತಿನ್ನುವ ಬಯಕೆ ಹೆಚ್ಚುತ್ತದೆ ಮತ್ತು ದೇಹದ ಚಯಾಪಚಯವೂ ವ್ಯತ್ಯಾಸ ಆಗುತ್ತದೆ. ಹೀಗಾದರೆ ನಿಮ್ಮ ಯಾವೆಲ್ಲ ಪ್ರಯತ್ನದ ನಡುವೆಯೂ ಹೊಟ್ಟೆ ಡುಮ್ಮಾಗುವುದನ್ನು ತಡೆಯುವುದಕ್ಕೆ ಹೇಗೆ ಸಾಧ್ಯ?

ತಾಳ್ಮೆ ಇರಲಿ

ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಸಹಜವಾಗಿಯೇ ಸ್ವಲ್ಪ ಹಠಮಾರಿ. ಶರೀರದ ಉಳಿದೆಲ್ಲ ಭಾಗಗಳಲ್ಲಿ ಆಗುವ ಪರಿಣಾಮ ಇಲ್ಲಿಯೂ ಕಾಣುವುದಕ್ಕೆ ಸ್ವಲ್ಪ ಸಮಯ ಬೇಕು. ಎಲ್ಲಕ್ಕಿಂತ ಕಡೆಯದಾಗಿ ಕರಗುವ ಭಾಗವೆಂದರೆ ಹೊಟ್ಟೆ ಎಂದು ತಿಳಿದರೂ ಸರಿಯೆ. ಇದಕ್ಕಾಗಿ ಹೆಚ್ಚಿನ ತಾಳ್ಮೆ ಮತ್ತು ಸುಸ್ಥಿರ ಶಿಸ್ತಿನ ಅವಶ್ಯಕತೆಯಿದೆ. ಹಾಗಾಗಿ ತೂಕ ಇಳಿಸುವ ವ್ರತ ಬಿಡಬೇಡಿ. ಸಂಯಮ ಇರಿಸಿಕೊಳ್ಳಿ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon