ಬೆಂಗಳೂರು : 2023ರ ವಿಧಾನಸಭೆ ಚುನಾವಣೆಗೆ ಮುನ್ನ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ನಿಜ. ಆದರೆ ಈಗಲ್ಲ. ಆಗ ಅವರು ಬರುವುದಿಲ್ಲ, ಬಿಜೆಪಿಯಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದಿದ್ದರು. ನಾನು ನಮ್ಮ ಪಕ್ಷಕ್ಕೆ ಈ ರೀತಿ ಸುಮಾರು 50 ಜನರನ್ನು ಆಹ್ವಾನಿಸಿದ್ದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಶ್ರೀರಾಮುಲು ಅವರು ನನಗೆ ಸಿಕ್ಕಿಲ್ಲ. ನನ್ನ ಬಳಿ ಅವರು ಮಾತನಾಡಿಲ್ಲ ಈ ವಿಚಾರದಲ್ಲಿ ಜನಾರ್ದನರೆಡ್ಡಿ, ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜನಾರ್ದನ ರೆಡ್ಡಿ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾನೆ. ಆತ ಆಗ ಪಕ್ಷದಲ್ಲಿಯೇ ಇರಲಿಲ್ಲ. ಈಗ ಆ ಪಕ್ಷಕ್ಕೆ ಕಾಲಿಟ್ಟ. ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ. ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ? ಆತ ನನ್ನ ಹೆಸರು ತೆಗೆದುಕೊಂಡರೆ ದೊಡ್ಡವನಾಗುತ್ತಾನೆಯೇ? ನಾನು ಸಂಪರ್ಕದಲ್ಲಿ ಇರುವುದನ್ನು ಆತ ನೋಡಿದ್ದಾನೆಯೇ? ಆತನೇ ಯಾರ ಜೊತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚಿಸುವುದು ಬೇಡ. ನಾನು ಯಾವುದನ್ನು ಬಹಿರಂಗಗೊಳಿಸಲು ಹೋಗುವುದಿಲ್ಲ ಎಂದರು.