ಬೆಳಗಾವಿ : ಬೆಳಗಾವಿ ಮೂಲದ ಶೃತಿ ಯರಗಟ್ಟಿ ಕೂಡ ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದವರಲ್ಲಿ ಒಬ್ಬರು. 362ನೇ ರ್ಯಾಂಕ್ ಪಡೆದಿರುವ ಶೃತಿ ಅವರು ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣದ ನಿವಾಸಿ.
ಶಿರಢಾಣ ಗ್ರಾಮದ ಡಾ.ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಅವರು, ಕೆಸಿಡಿ ಧಾರವಾಡದಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ. ಬಿಎಸ್ ಸಿಯಲ್ಲಿ 7 ಚಿನ್ನದ ಪದಕ ಗಳಿಸಿದ್ದಾರೆ.
ಪದವಿ ಬಳಿಕ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ಶುರು ಮಾಡಿದರು. 1 ವರ್ಷಗಳ ಕಾಲ ಕೋಚಿಂಗ್ ಅನ್ನು ಸಹ ಪಡೆದುಕೊಂಡಿದ್ದರು. 5 ಪ್ರಯತ್ನಗಳಲ್ಲಿ ವಿಫಲರಾದ ಬಳಿಕ ತಮ್ಮ 6ನೇ ಪ್ರಯತ್ನದಲ್ಲಿ ಶೃತಿ ಯುಪಿಎಸ್ಸಿ ಪಾಸ್ ಮಾಡಿದ್ದಾರೆ.
ಮೊದಲ 3 ಪ್ರಯತ್ನಗಳಲ್ಲಿ ಶೃತಿ ಅವರಿಗೆ ಪ್ರಿಲಿಮ್ಸ್ ಸಹ ಪಾಸ್ ಮಾಡಲು ಆಗಲಿಲ್ಲ. 4ನೇ ಬಾರಿ ಸಂದರ್ಶನದ ಹಂತಕ್ಕೆ ಹೋದರೂ ಅಂತಿಮ ಯಶಸ್ಸು ಸಿಗಲಿಲ್ಲ. 5ನೇ ಪ್ರಯತ್ನದಲ್ಲೂ ಸಾಧ್ಯವಾಗಲಿಲ್ಲ. ಕೊನೆಗೆ 6ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಶೃತಿ ಅವರಿಗೆ ಅವರ ಶಾಲಾ ಶಿಕ್ಷಕರೊಬ್ಬರು ಐಎಎಸ್, ಐಪಿಎಸ್ ಅಧಿಕಾರಿಗಳ ಬಗ್ಗೆ ತಿಳಿಸಿದ್ದು ಅದರಿಂದ ಸ್ಪೂರ್ತಿ ಪಡೆದು, ಅಂದಿನಿಂದ ತಮ್ಮ ಗುರಿಯತ್ತ ಸಾಗಲು ಶ್ರಮವಹಿಸಿದರು. ಶೃತಿ ಅವರ ತಂದೆ ನಿವೃತ್ತ ಶಾಲಾ ಶಿಕ್ಷಕರಾಗಿದ್ದಾರೆ. ಇವರ ಕುಟುಂಬದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿರುವವರಲ್ಲಿ ಶೃತಿ ಅವರೇ ಮೊದಲಿಗರು.
































