ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದ ಎಲ್ಲ ಕಾರ್ಯಗಳನ್ನು ಉತ್ತಮಗೊಳಿಸಲು ನೀರಿನ ಅವಶ್ಯಕತೆಯಿದೆ. ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಈಗ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದ್ರೆ ನಿರ್ಜಲೀಕರಣ ಸಮಸ್ಯೆ ಶುರುವಾಗುತ್ತದೆ. ಹಾಗಾಗಿ ಪ್ರತಿ ದಿನ 3 ಲೀಟರ್ ನೀರು ಕುಡಿಯಬೇಕು.
ಕುಡಿದ ನೀರು ಆರೋಗ್ಯ ವೃದ್ಧಿಸಬೇಕೆನ್ನುವವರು ಸರಿಯಾದ ಸಮಯದಲ್ಲಿ ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಸರಿಯಾದ ಸಮಯದಲ್ಲಿ ನೀರು ಕುಡಿಯುವುದ್ರಿಂದ ಹೊಟ್ಟೆ ನೋವು, ಗ್ಯಾಸ್ಟ್ರಿಕ್, ದಣಿವು, ಮಲಬದ್ಧತೆ, ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಕಡಿಮೆಯಾಗುತ್ತದೆ.
ಬೆಳಿಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ನೀರು ಕುಡಿಯಬೇಕು. ಇದು ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುತ್ತದೆ. ದಿನವಿಡಿ ದೇಹಕ್ಕೆ ಶಕ್ತಿ ನೀಡುತ್ತದೆ. ಊಟಕ್ಕೆ 30 ನಿಮಿಷಗಳ ಮೊದಲು ನೀರು ಕುಡಿಯುವುದು ಒಳ್ಳೆಯದು. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಊಟಕ್ಕೆ ಮೊದಲು ನೀರು ಕುಡಿಯುವುದರಿಂದ ಹೊಟ್ಟೆ ತುಂಬುತ್ತದೆ. ಇದರಿಂದಾಗಿ ಹೆಚ್ಚು ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
ಸ್ನಾನ ಮಾಡಿದ ನಂತರ ಒಂದು ಗ್ಲಾಸ್ ನೀರು ಕುಡಿಯಬೇಕು. ಇದು ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದ್ರೆ ಸ್ನಾನದ ನಂತರ ತಣ್ಣೀರು ಕುಡಿಯಬಾರದು. ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು. ಮಲಗುವ ಮೊದಲು ನೀರು ಕುಡಿಯುವುದರಿಂದ ದೇಹವು ರಾತ್ರಿಯಿಡೀ ಹೈಡ್ರೀಕರಿಸುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ರಾತ್ರಿ ಹೆಚ್ಚು ನೀರು ಕುಡಿಯಬೇಡಿ.