ಬೆಂಗಳೂರು: ಚಾಮರಾಜನಗರದ ಗಾಳಿಪುರ ಬೈಪಾಸ್ನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಲಾರಿ, ಕಾರು ಮತ್ತು ದ್ವಿಚಕ್ರ ವಾಹನ ನಡುವಿನ ಸರಣಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ ಆಗಿದೆ. ಮೆರಾನ್, ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಮೃತರು. ಸರಣಿ ಅಪಘಾತದಲ್ಲಿ 10 ವರ್ಷದ ಮೆರಾನ್ ನಿನ್ನೆ ಸ್ಥಳದಲ್ಲೇ ಮೃತಪಟ್ಟಿದ್ದ. ಮೂವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಮೃತಪಟ್ಟಿದ್ದಾರೆ. ಈದ್ ಮಿಲಾದ್ ಸಂಭ್ರದಲ್ಲಿದ್ದ ಕುಟುಂಬಗಳಿಗೆ ಮಕ್ಕಳ ಸಾವು ಬರಸಿಡಿಲಿನಂತೆ ಎರಗಿದೆ.
ನಾಲ್ವರು ಬಾಲಕರು ಬೈಕ್‌ನಲ್ಲಿ ಗಾಳಿಪುರದ ಬಳಿ ಇರುವ ಔಟರ್ ರಿಂಗ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವಾಗ ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರು. ಬೈಕ್ ಹಿಂದೆಯೇ ಇದ್ದ ಕಾರು ಕೂಡ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ನಾಲ್ವರು ಹೆಲ್ಮೆಟ್ ಹಾಕಿರ್ಲಿಲ್ಲ, ಪರಿಣಾಮ ನಾಲ್ವರಿಗೂ ತಲೆಗೆ ಗಂಭೀರ ಏಟಾಗಿತ್ತು.