ಮಧ್ಯಪ್ರದೇಶ : ವ್ಯಕ್ತಿಯೋರ್ವ ರೈಲಿನ ಬೋಗಿಯ ಕೆಳಗೆ, ಚಕ್ರಗಳ ನಡುವೆ ಅಡಗಿ ಕುಳಿತುಕೊಂಡು 290 ಕಿಮೀ ಪ್ರಯಾಣಿಸಿರುವ ಘಟನೆ ಮಧ್ಯಪ್ರದೇಶದ ಜಬಲ್‌ಪುರದದಲ್ಲಿ ನಡೆದಿದೆ.
ಈ ವ್ಯಕ್ತಿ ದಾನಪುರ ಎಕ್ಸ್‌ಪ್ರೆಸ್‌ನ ಕೋಚ್‌ನಡಿಯಲ್ಲಿ ಕುಳಿತು ಇಟಾರ್ಸಿಯಿಂದ ಜಬಲ್‌ಪುರದವರೆಗೆ ಪ್ರಯಾಣಿಸಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಜಬಲ್ಪುರ ರೈಲು ನಿಲ್ದಾಣದ ಬಳಿ ರೋಲಿಂಗ್ ಪರೀಕ್ಷೆಯ ಸಂದರ್ಭ ರೈಲಿನ ಸಿಬ್ಬಂದಿ ಕೋಚ್ ಅಡಿಯಲ್ಲಿ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆತಂಕಗೊಂಡ ನೌಕರರು ಕೂಡಲೇ ಸ್ಥಳಕ್ಕೆ ಆರ್‌ಪಿಎಫ್‌ಗೆ ಕರೆ ಮಾಡಿದ್ದಾರೆ.
ಅಡಗಿ ಕುಳಿತಿದ್ದ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದು, ಆ ವ್ಯಕ್ತಿ ಎಲ್ಲಿಂದ ಬಂದವನು ಅಥವಾ ರೈಲಿನ ಟ್ರಾಲಿಯನ್ನು ಹೇಗೆ ಪ್ರವೇಶಿಸಿದನು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ರೈಲ್ವೇ ರಕ್ಷಣಾ ಪಡೆ ವ್ಯಕ್ತಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ರೈಲಿನಡಿಯಿಂದ ವ್ಯಕ್ತಿ ಹೊರಬರುತ್ತಿರುವ ವಿಡಿಯೋದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.