ದಾವಣಗೆರೆ : ಮಧ್ಯ ಕರ್ನಾಟಕದ ಕೇಂದ್ರ ಬಿಂದು, ಬೆಣ್ಣೆದೋಸೆ, ಚುರುಮುರಿ ನಗರಿ ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ 2025 ಜನವರಿ 4 ಮತ್ತು 5ರ ಶನಿವಾರ ಮತ್ತು ಭಾನುವಾರ ಬೃಹತ್ ಆಟೋ ಎಕ್ಸ್ ಪೋ ಆಯೋಜನೆ ಮಾಡಲಾಗಿದೆ ಎಂದು ಅಮೃತಾ ಐ.ಎನ್.ಸಿ ಸಂಸ್ಥಾಪಕರಾದ ಆ್ಯನಿ ಅಮೃತಾ ಶ್ರೀನಿವಾಸ್ ತಿಳಿಸಿದರು.
ದಾವಣಗೆರೆ ನಗರದ ಸದರನ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಆಟೋ ಎಕ್ಸ್ ಪೋ ಆಯೋಜಿಸಿದ್ದು, ಸಾರ್ವಜನಿಕರಿಗೆ ಮಲ್ಟಿ ಬ್ರಾಂಡ್ ಕಾರು ಹಾಗೂ ದ್ವಿಚಕ್ರ ವಾಹನಗಳ ಪ್ರದರ್ಶನ ಮತ್ತು ಮಾಹಿತಿ ಲಭ್ಯವಾಗಲಿದೆ. ಜ.4 ರಂದು ಬೆಳಗ್ಗೆ 11 ಗಂಟೆಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಆಟೋ ಎಕ್ಸ್ ಪೋಗೆ ಚಾಲನೆ ನೀಡಲಿದ್ದಾರೆ. ದಾವಣಗೆರೆ ಶುಗರ್ಸ್ ಹಾಗೂ ಸದರನ್ ಹೋಟೆಲ್ ವ್ಯಾವಸ್ಥಾಪಕ ನಿರ್ದೇಶಕರಾದ ಅಭಿಜಿತ್ ಅವರು ವಿಶೇಷ ಅತಿಥಿಗಳಾಗಿ ಭಾಗವಲಿಸಲಿದ್ದಾರೆ ಎಂದರು.
ಎರಡು ದಿನಗಳ ಕಾಲ ವಿವಿಧ ಕಂಪನಿಯ ಐಷಾರಾಮಿ ಕಾರುಗಳು ಹಾಗೂ ಬೈಕ್ಗಳು ಪ್ರದರ್ಶನಕ್ಕಿದ್ದು, ಸಾರ್ವಜನಿಕರು ಉಚಿತವಾಗಿ ಭೇಟಿ ನೀಡಿ ತಮ್ಮ ಇಚ್ಛೆಯ ಕಾರುಗಳನ್ನು ಕಣ್ತುಂಬಿಕೊಂಡು ಮಾಹಿತಿ ಪಡೆಯಬಹುದು. ಈ ಆಟೋ ಎಕ್ಸ್ ಫೋದಲ್ಲಿ 15 ಕ್ಕೂ ಹೆಚ್ಚಿನ ಬ್ರ್ಯಾಂಡ್ ಕಂಪನಿಯ ಕಾರು ಹಾಗೂ ದ್ವಿಚಕ್ರ ವಾಹನಗಳು ಪ್ರದರ್ಶನಗೊಳ್ಳಲಿವೆ. ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ರಾಜ್ಯದ ಪ್ರತಿಷ್ಠಿತ ಕಾರು ಹಾಗೂ ಬೈಕ್ ಕಂಪನಿಗಳು ಇದರಲ್ಲಿ ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ಒಂದೇ ಸೂರಿನ ಅಡಿಯಲ್ಲಿ ವಿವಿಧ ಕಂಪನಿಯ ಕಾರು ಹಾಗೂ ಬೈಕ್ಗಳು ಪ್ರದರ್ಶನಗೊಳ್ಳುವುದರಿಂದ ವಾಹನ ಪ್ರಿಯರು, ಆಸಕ್ತರು ಭೇಟಿ ನೀಡಿ ವಾಹನಗಳ ವಿಶೇಷತೆ, ಸಾಲ ಸೌಲಭ್ಯ, ಬುಕ್ಕಿಂಗ್ ಕುರಿತಾಗಿಯೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಕಂಪನಿಗಳು ಸ್ಥಳದಲ್ಲೇ ವಿಶೇಷ ರಿಯಾಯಿತಿ ನೀಡಿ ಬುಕ್ಕಿಂಗ್ ಕೂಡ ಮಾಡಿಕೊಳ್ಳುತ್ತವೆ.
ಆಟೋ ಎಕ್ಸ್ ಪೋ ವಿಕ್ಷಣೆಗೆ ಮುಕ್ತ ಅವಕಾಶವಿದ್ದು, ದಾವಣಗೆರೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಾದ ಚಿತ್ರದುರ್ಗ ಶಿವಮೊಗ್ಗ, ಹಾವೇರಿ, ವಿಜಯನಗರ, ಬಳ್ಳಾರಿಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ ಎಂದರು.
ಗಜೇಂದ್ರ ಟಾಟಾ ಶೋ ರೂಂ ಮಾಲೀಕರಾದ ಎ.ಕೆ.ಚನ್ನಪ್ಪ, ಚಿತ್ರದುರ್ಗದ ಶ್ರೀ ಮಾರುತಿ ಗ್ಯಾಸ್ ಸರ್ವೀಸ್ ನ ಎಸ್.ಪಿ.ಲೋಹಿತ್ ಪ್ರಸಾದ್, ರೋಟರಿ ಇಂಟರ್ನ್ಯಾಷನಲ್ 3160 ಜಿಲ್ಲಾ ಗೌವರ್ನರ್ ನಯನ್ ಎಸ್. ಪಾಟೀಲ್, ಹಿರಿಯೂರಿನ ಪ್ರೆಸಿಡೆಂನ್ಸಿ ಶಾಲೆಯ ಮುಖ್ಯಸ್ಥರಾದ ಬಿ,ಜಿ, ತಿಮ್ಮಾರೆಡ್ಡಿ, ಜಿಲ್ಲು ಬೈಕ್ಸ್ ನ ವ್ಯವಸ್ಥಾಪಕ ನಿರ್ದೇಶಕ ಆಂಥೋನಿ ರಾಜ್, ಅಮೃತಾ ಐ.ಎನ್.ಸಿ ಮತ್ತೊಬ್ಬ ಸಂಸ್ಥಾಪಕರಾದ ಎಚ್.ಡಿ.ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿದ್ದರು..