ಮಂಡ್ಯ : ಜೆಡಿಎಸ್ ಭದ್ರಕೋಟೆ ಮೇಲೆ ಕಣ್ಣಿಟ್ಟು ದೇವೇಗೌಡರ ತವರು ಹಾಸನದಲ್ಲಿ ಶಕ್ತಿ ಪ್ರದರ್ಶನ ನಡೆಸಿದ ‘ಕೈ’ ಪಡೆಗೆ ಟಕ್ಕರ್ ಕೊಡಲು ಗೌಡರ ಕುಟುಂಬ ಸಜ್ಜಾಗಿದ್ದಾರೆ. ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅಭಿನಂದನಾ ಸಮಾರಂಭ ಆಯೋಜಿಸುವ ಮೂಲಕ ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ ತಿರುಗೇಟು ನೀಡಲು ಸಿದ್ಧತೆ ನಡೆಸಿದೆ.
ಚನ್ನಪಟ್ಟಣ ಸೇರಿದಂತೆ 3 ಕ್ಷೇತ್ರಗಳ ಉಪಚುನಾವಣೆ ಗೆಲುವಿನ ಬಳಿಕ ಹಳೇ ಮೈಸೂರು ಭಾಗ ಕಬ್ಜಾ ಮಾಡಲು ಮುಂದಾಗಿರುವ ಕಾಂಗ್ರೆಸ್. ಮಾಜಿ ಪ್ರಧಾನಿ ದೇವೇಗೌಡರ ಪ್ರಾಬಲ್ಯವಿರುವ ಹಾಸನದಲ್ಲಿ ಜನಕಲ್ಯಾಣ ಹೆಸರಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದೆ. ಕಾಂಗ್ರೆಸ್ಸಿಗರ ಸಮಾವೇಶಕ್ಕೆ ಪ್ರತ್ಯುತ್ತರ ನೀಡಲು ಜೆಡಿಎಸ್ ಪ್ಲಾನ್ ಮಾಡಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಹುಟ್ಟುಹಬ್ಬದ ಹಿನ್ನೆಲೆ ಮಂಡ್ಯದಲ್ಲಿ ಹೆಚ್‌ಡಿಕೆ ಅಭಿನಂದನಾ ಕಾರ್ಯಕ್ರಮ ಹೆಸರಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ.
ಡಿ.15 ರಂದು ಮಂಡ್ಯದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸುವ ಗುರಿಯನ್ನು ಜೆಡಿಎಸ್ ನಾಯಕರು ಹೊಂದಿದ್ದಾರೆ