ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್‌ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಪಾರ್ವತಿ ಅವರಿಗೆ ಇಡಿ ನೀಡಿದ್ದ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವ ಕುರಿತು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮುರ್ತಿ ಬಿಆರ್ ಗವಾಯಿ ಅವರಿದ್ದ ಪೀಠ, ಇಡಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಕುರಿತು ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ ಅರ್ಜಿಯನ್ನು ವಜಾಗೊಳಿಸಿದೆ.
“ದಯವಿಟ್ಟು ನಾವು ಬಾಯಿ ತೆರೆಯುವಂತೆ ಮಾಡಬೇಡಿ. ಹಾಗೆ ಮಾಡಿದರೆ, ನಾವು ಇಡಿ ಬಗ್ಗೆ ಕೆಲವು ಕಟು ಟೀಕೆಗಳನ್ನು ಮಾಡಬೇಕಾಗಬಹುದು. ದುರದೃಷ್ಟವಶಾತ್, ನನಗೆ ಮಹಾರಾಷ್ಟ್ರದಲ್ಲಿ ಸ್ವಲ್ಪ ಅನುಭವವಿದೆ. ನೀವು ಈಗ ದೇಶಾದ್ಯಂತ ಈ ರೀತಿಯ ವರ್ತನೆ ಮುಂದುವರಿಸಬಾರದು. ರಾಜಕೀಯ ಪೈಪೋಟಿಯನ್ನು ಏನಿದ್ದರೂ ಮತದಾರರ ಎದುರು ಮಾಡಿಕೊಳ್ಳಲಿ ನಡೆಸಲಿ. ಇಡಿಯನ್ನು ಏಕೆ ಎಂದು ಬಳಸಲಾಗುತ್ತಿದೆ” ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಎಸ್‌ವಿ ರಾಜಿ ಅವರನ್ನು ಸಿಜೆಐ ಬಿಆರ್ ಗವಾಯಿ ಪ್ರಶ್ನಿಸಿದ್ದಾರೆ.
ಮುಂದುವರಿದು, ಏಕಸದಸ್ಯ ಪೀಠದ ತೀರ್ಪಿನಲ್ಲಿ ನಮಗೆ ಲೋಪ ಕಂಡುಬಂದಿಲ್ಲ. ಹೀಗಾಗಿ ಇಡಿ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ತಿಳಿಸಿದರು. ಈ ಮೂಲಕ ಮುಡಾ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.